ತುಮಕೂರು : ಮೇಕೆದಾಟು ಯೋಜನೆ ಅನುಷ್ಠಾನದಿಂದ ಜಿಲ್ಲೆಯ ಹತ್ತು ತಾಲೂಕುಗಳಿಗೂ ಹೇಮಾವತಿ ನದಿ ನೀರನ್ನು ಯಥೇಚ್ಛವಾಗಿ ಬಳಕೆ ಮಾಡಬಹುದಾಗಿದೆ ಎಂದು ಮಾಜಿ ಸಚಿವ ಟಿ ಬಿ ಜಯಚಂದ್ರ ತಿಳಿಸಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲೆ ಬರಗಾಲಕ್ಕೆ ತುತ್ತಾಗಿದೆ. ಕುಡಿಯುವ ನೀರಿಗೂ ಹಾಹಾಕಾರವಿದೆ. ಹೇಮಾವತಿ ನದಿ ನೀರು ಜಿಲ್ಲೆಯಲ್ಲಿ ಕುಡಿಯುವ ನೀರಿನ ದಾಹವನ್ನು ನೀಗಿಸುತ್ತಿದೆ. ಆದರೆ, ಎಲ್ಲ ತಾಲೂಕುಗಳಿಗೂ ನೀರನ್ನು ಹರಿಸಲು ಸಾಧ್ಯವಿಲ್ಲ ಎಂಬ ಮಾತುಗಳು ಪ್ರಸ್ತಾಪವಾಗುತ್ತಿದೆ. ಹೀಗಾಗಿ, ವ್ಯವಸ್ಥಿತ ಯೋಜನೆ ಮೂಲಕ ಹೇಮಾವತಿ ಜಲಾಶಯದಿಂದ ಜಿಲ್ಲೆಯ ಎಲ್ಲ ತಾಲೂಕುಗಳಿಗೂ ಕುಡಿಯುವ ನೀರಿನ ಬವಣೆಯನ್ನು ನೀಗಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ನವೆಂಬರ್-ಡಿಸೆಂಬರ್ ಸಮಯದಲ್ಲಿ ಮೆಟ್ಟೂರು ಜಲಾಶಯಕ್ಕೆ ಮುಂಗಾರು ಮಳೆ ನೀರು ಹರಿದು ಬರುತ್ತದೆ. ಹೀಗಾಗಿ, ಜಿಲ್ಲೆಯ 10 ತಾಲೂಕುಗಳಿಗೆ ಮುಂಗಾರು ಆರಂಭದ ವೇಳೆಗೆ ಹೇಮಾವತಿ ಜಲಾಶಯದಿಂದ ನೀರನ್ನು ಹರಿಸಿದ್ರೆ ನೀರಿನ ಬವಣೆ ನೀಗಲಿದೆ. ಹೀಗಾಗಿ, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮೇಕೆದಾಟು ಯೋಜನೆ ಅಸ್ತಿತ್ವಕ್ಕೆ ತರಲು ನಿರ್ಧರಿಸಲಾಗಿತ್ತು ಎಂದರು.
ಇದೀಗ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರವಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ಹೆಚ್ಚಿನ ಗಮನಹರಿಸಿ ಮೇಕೆದಾಟು ಯೋಜನೆ ಅಸ್ತಿತ್ವಕ್ಕೆ ತರಬೇಕಿದೆ ಎಂದು ಒತ್ತಾಯಿಸಿದರು. ಶಿರಾ ಉಪಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಬಂದು ಸಾಕಷ್ಟು ಮಾತನಾಡಿದ್ದಾರೆ. ಇನ್ನೊಂದೆರಡು ಮೂರು ತಿಂಗಳಲ್ಲಿ ಅವರ ಮಾತಿಗೆ ಎಷ್ಟು ಪುಷ್ಠಿ ದೊರೆಯಲಿದೆ ಎಂಬುದು ಬಹಿರಂಗವಾಗಲಿದೆ ಎಂದು ಪರೋಕ್ಷವಾಗಿ ತಿರುಗೇಟು ನೀಡಿದರು.
ಓದಿ: ಬರೀ ತೋರಿಕೆಗೆ ಜಿ ಟಿ ದೇವೇಗೌಡ್ರನ್ನ ಕೋರ್ ಕಮಿಟಿಗೆ ಸೇರಿಸಬೇಕಾ.. ಹೆಚ್ ಡಿ ಕುಮಾರಸ್ವಾಮಿ