ತುಮಕೂರು : ನಗರದಿಂದ ಚಿಕ್ಕಮಗಳೂರಿನ ದತ್ತ ಪೀಠಕ್ಕೆ ಯಾತ್ರೆ ತೆರಳುವ ಸಂದರ್ಭದಲ್ಲಿ ಮೆರವಣಿಗೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ತಾರಕ್ಕೇರಿ ವಿಶ್ವ ಹಿಂದೂ ಪರಿಷತ್ ಮುಖಂಡರೊಬ್ಬರ ಮೇಲೆ ಮಾಜಿ ಸಚಿವ ಸೊಗಡು ಶಿವಣ್ಣ ಹಲ್ಲೆಗೆ ಯತ್ನಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರಿನಲ್ಲಿ ದತ್ತಮಾಲೆ ಅಭಿಯಾನದ ಹಿನ್ನೆಲೆ ಚಿಕ್ಕಮಗಳೂರಿನ ದತ್ತ ಪೀಠಕ್ಕೆ ತೆರಳುವ ಮುನ್ನ ತುಮಕೂರು ನಗರದಲ್ಲಿ ಯಾವ ಮಾರ್ಗದ ಮೂಲಕ ಯಾತ್ರೆ ಸಾಗಬೇಕು ಎನ್ನುವ ವಿಚಾರಕ್ಕಾಗಿ ವಿಶ್ವ ಹಿಂದೂಪರಿಷತ್ ಹಿರಿಯ ಮುಖಂಡ ಜಿ. ಕೆ ಶ್ರೀನಿವಾಸ್ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಅವರ ನಡುವೆ ವಾಗ್ವಾದ ನಡೆಯಿತು.
ಮೊದಲಿಗೆ ಟೌನ್ಹಾಲ್ನಲ್ಲಿ ದತ್ತ ಮಾಲಾಧಾರಿಗಳು ಸೇರಿದ್ದರು. ಈ ವೇಳೆ ಮಾಜಿ ಸಚಿವ ಸೊಗಡು ಶಿವಣ್ಣ ನಗರದಲ್ಲಿ ಯಾತ್ರೆ ನಡೆಸಬೇಕು ಎಂದು ತಿಳಿಸಿದ್ರೆ, ವಿಶ್ವ ಹಿಂದೂ ಪರಿಷತ್ ಮುಖಂಡ ಜಿ. ಕೆ ಶ್ರೀನಿವಾಸ್ ಮೆರವಣಿಗೆ ನಡೆಸೋದು ಬೇಡ, ನೇರವಾಗಿ ಚಿಕ್ಕಮಗಳೂರಿಗೆ ಹೋಗೋಣ ಎಂದು ತಿಳಿಸಿದ್ದಾರೆ.
ಇಬ್ಬರ ನಡುವೆ ಮಾತು ತಾರಕಕ್ಕೇರಿದೆ. ಮಾತಿಗೆ ಮಾತು ಬೆಳೆದು ಕೋಪಗೊಂಡ ಮಾಜಿ ಸಚಿವ ಸೊಗಡು ಶಿವಣ್ಣ ಅವರು, ವಿಹೆಚ್ಪಿ ಮುಖಂಡ ಜಿ.ಕೆ ಶ್ರೀನಿವಾಸ್‌ರನ್ನ ತಳ್ಳಿ ಅವರ ಮೇಲೆ ಹಲ್ಲೆಗೆ ಯತ್ನಿಸಿದರು. ನಂತರ ಸ್ಥಳದಲ್ಲಿದ್ದವರು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.