ತುಮಕೂರು: ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನಗಳನ್ನು ಕೊಡಿಸುವುದಾಗಿ ಹೇಳಿ ವಂಚಿಸಿದ್ದ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಧುಕುಮಾರ್, ಗುರುಪ್ರಸಾದ್ , ಶ್ರೀನಿವಾಸ, ಆಯಾಸ್ ಅಹಮದ್, ಲೋಕೇಶ್, ಮಂಜುನಾಥ ಬಂಧಿತ ಆರೋಪಿಗಳಾಗಿದ್ದಾರೆ ಇನ್ನೂ ಮಹಿಳೆ ಸೇರಿದಂತೆ ಇಬ್ಬರು ತಲೆಮರಿಸಿಕೊಂಡಿದ್ದಾರೆ.
ತುಮಕೂರು ನಗರದ ಸದಾಶಿವ ನಗರದ ವಾಸಿ ಅನ್ಸರ್ ಅಹಮದ್ ಖಾನ್ ಎಂಬುವರಿಗೆ ತುಮಕೂರು ನಗರದಲ್ಲಿ ಹರಾಜಾಗುವ ಮುನ್ನವೇ ಸೈಟುಗಳನ್ನು ಕಡಿಮೆ ಬೆಲೆಗೆ ಕೊಡಿಸುವುದಾಗಿ ನಂಬಿಸಿ 31 ವಿವಿಧ ಹೆಸರುಗಳಲ್ಲಿ ಡಿಡಿಗಳನ್ನು ಟೂಡಾ ಕಮಿಷನರ್ ತುಮಕೂರು ಇವರ ಹೆಸರಿಗೆ ತೆಗೆಸಿದ್ದಾರೆ.
ಒಟ್ಟು 89 ಲಕ್ಷ ರೂಗಳನ್ನು ಪಡೆದು ಸೈಟುಗಳನ್ನು ಕೊಡಿಸದೆ ವಂಚಿಸಿದ್ದಾರೆ. ನಂತರ ಡಿಡಿ ಗಳನ್ನು ಬೆಂಗಳೂರಿನ ಕಾರ್ಪೊರೇಷನ್ ಕಚೇರಿ ಬಳಿಯಲ್ಲಿರುವ ಡಿಡಿ ಕಮೀಷನ್ ಏಜೆಂಟ್ ಬಳಿ ಡಿಸ್ಕೌಂಟ್ ಮೂಲಕ ನಗದು ಮಾಡಿಸಿಕೊಂಡಿದ್ದಾರೆ. ಅಲ್ಲದೆ ಲೋಕೇಶ್ ಮತ್ತು ಆರ್ ಮಂಜುನಾಥ್ ಅವರುಗಳ ಮೂಲಕ ಡಿಡಿಯನ್ನು ನಗದು ಮಾಡಿಸಿಕೊಂಡಿರುವ ಆರೋಪಿಗಳು ಹಂಚಿಕೊಂಡಿದ್ದಾರೆ. ಈ ಸಂಬಂಧ ಅನ್ಸರ್ ಅಹಮದ್ ಖಾನ್ ತಿಲಕ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಸಂಬಂಧ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಬಂಧಿತ ಆರೋಪಿಗಳಿಂದ ಆರು ಲಕ್ಷ ರೂ ಬೆಲೆ ಬಾಳುವ ಕಾರು ಮತ್ತು 2.15 ಲಕ್ಷ ರೂ ಬೆಲೆಬಾಳುವ ರಾಯಲ್ ಎನ್ಫೀಲ್ಡ್ ಬೈಕ್ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ