ತುಮಕೂರು: ಶಿರಾ ವಿಧಾನಸಭೆ ಉಪಚುನಾವಣೆ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳಿಗೂ ಚಿಹ್ನೆಗಳ ಹಂಚಿಕೆ ಮಾಡಲಾಗಿದ್ದು, ಪಕ್ಷೇತರ ಅಭ್ಯರ್ಥಿ ಅಂಬ್ರೋಸ್ ಡಿ'ಮೆಲ್ಲೋ ಅವರಿಗೆ ಚಪ್ಪಲಿ ಗುರುತು ನೀಡಲಾಗಿದೆ.
ಮೂಲತಃ ಬೆಂಗಳೂರಿನ ನಿವಾಸಿ ಆಗಿರುವ ಇವರು ಪಕ್ಷೇತರರಾಗಿ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಕಣದಲ್ಲಿ ಇರುವ 15 ಅಭ್ಯರ್ಥಿಗಳ ಪೈಕಿ ಮೂವರು ಮಹಿಳೆಯರು ಇದ್ದಾರೆ. ರಾಷ್ಟ್ರೀಯ ಮತ್ತು ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾಗಿ ನಾಲ್ವರು ಕಣದಲ್ಲಿ ಉಳಿದಿದ್ದಾರೆ. ಅದರಲ್ಲಿ ಜೆಡಿಎಸ್ ಪಕ್ಷದಿಂದ ಅಮ್ಮಾಜಮ್ಮ ಬಿ ಸತ್ಯನಾರಾಯಣ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಗಿರೀಶ್, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದಿಂದ ಟಿಬಿ ಜಯಚಂದ್ರ, ಬಿಜೆಪಿಯಿಂದ ಡಾ ಸಿಎಂ ರಾಜೇಶ್ ಗೌಡ ಕಣದಲ್ಲಿದ್ದಾರೆ.
ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾಗಿ ಮೂವರು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅದರಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಬಿಟಿ ಓಬಳೆಶಪ್ಪ, ರೈತ ಭಾರತ ಪಾರ್ಟಿ ಪಕ್ಷದಿಂದ ತಿಮ್ಮಕ್ಕ , ರಿಪಬ್ಲಿಕ್ ಸೇನೆ ಪಕ್ಷದಿಂದ ಪ್ರೇಮಕ್ಕ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಎಂಟು ಮಂದಿ ಪಕ್ಷೇತರರು ಇದ್ದಾರೆ.