ತುಮಕೂರು: ಶಿರಾ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಈಗಾಗಲೇ ಮೂವರ ಹೆಸರನ್ನು ಹೈಕಮಾಂಡ್ಗೆ ಕಳುಹಿಸಲಾಗಿದ್ದು, ಅಂತಿಮವಾಗಿ ಇನ್ನೆರಡು ದಿನದಲ್ಲಿ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿಗಷ್ಟೇ ಪಕ್ಷ ಸೇರ್ಪಡೆಗೊಂಡಿರುವ ಡಾ. ರಾಜೇಶ್, ಮಂಜುನಾಥ್ ಮತ್ತು ಎಸ್ಆರ್ ಗೌಡ ಅವರ ಹೆಸರುಗಳನ್ನು ಹೈಕಮಾಂಡ್ಗೆ ಕಳುಹಿಸಲು ಕೊಡಲಾಗಿದೆ. ಈಗಾಗಲೇ ಬೂತ್ ಮಟ್ಟದ ಪ್ರಚಾರ ಸಭೆಯನ್ನು ಕೈಗೊಳ್ಳಲಾಗಿದೆ. ಈ ಹಿಂದಿನ ಯಾವ ಶಾಸಕರು ತಲುಪದಂತಹ ಕ್ಷೇತ್ರದಲ್ಲಿನ ಸ್ಥಳಗಳಿಗೆ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ತೆರಳಿ ಸಂಘಟನೆಯಲ್ಲಿ ತೊಡಗಿದ್ದಾರೆ ಎಂದರು.
ಈಗಾಗಲೇ ಮೂರು ಕಡೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹ ತೆರಳಿ ಬಿಜೆಪಿ ಕಾರ್ಯಕರ್ತರನ್ನು ಸಂಘಟಿಸುತ್ತಿದ್ದಾರೆ. ಪ್ರತಿ ಸಭೆಯಲ್ಲಿಯೂ ಕನಿಷ್ಠ ಮೂರು ಸಾವಿರ ಕಾರ್ಯಕರ್ತರು ಭಾಗವಹಿಸಿದ್ದಾರೆ. ಹೀಗಾಗಿ ಈ ಬಾರಿಯ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಎಲ್ಲ ಸಾಧ್ಯತೆಗಳು ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಚಿದಾನಂದರನ್ನು ಕಣಕ್ಕಿಳಿಸಲಾಗುತ್ತದೆ. ಐದು ಜಿಲ್ಲೆಗಳನ್ನು ಒಳಗೊಂಡ ಈ ಕ್ಷೇತ್ರದ ಚುನಾವಣೆ ನಡೆಸಲು ಬಿಜೆಪಿ ಸರ್ವಸನ್ನದ್ಧವಾಗಿದ್ದು, ಚಿದಾನಂದರನ್ನು ಸರ್ವಸಮ್ಮತ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ ಎಂದು ತಿಳಿಸಿದರು.