ತುಮಕೂರು: ಜಿಲ್ಲೆಯಲ್ಲಿ ತ್ರಿವಿಧ ದಾಸೋಹಕ್ಕೆ ಮಾತ್ರ ಸೀಮಿತವಾಗಿರದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಸಾರ್ವಜನಿಕರ ಧಾರ್ಮಿಕ ಆಚರಣೆಗಳಿಗೂ ಸಾಥ್ ನೀಡುತ್ತಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ತುಮಕೂರಿನ ವಿನಾಯಕ ನಗರದಲ್ಲಿ ಪ್ರತೀ ವರ್ಷ ಪ್ರತಿಷ್ಠಾಪಿಸಲಾಗುವ ಗಣೇಶ ಮೂರ್ತಿ ಸಾಕ್ಷಿಯಾಗಿದೆ. ಆದರೆ ಈ ಬಾರಿ ಕೊರೊನಾ ಸೋಂಕು ಹರಡುವಿಕೆ ಭೀತಿಯಿಂದಲೇ ಅತಿ ಸರಳವಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
1972 ರಲ್ಲಿ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ತುಮಕೂರು ನಗರದ ಪ್ರಸಿದ್ಧ ಗಣೇಶೋತ್ಸವಕ್ಕೆ ಚಾಲನೆ ನೀಡಿದ್ದರು. ಅಂದಿನಿಂದ ಇಂದಿನವರೆಗೂ ಈ ಗಣೇಶೋತ್ಸವ ಕಾರ್ಯಕ್ರಮ ನಡೆದುಕೊಂಡು ಬಂದಿತ್ತು. ಆದರೆ, ಈ ಬಾರಿ ಕೊರೊನಾ ಸೋಂಕಿನ ಭೀತಿ ನಡುವೆ ಸರ್ಕಾರದ ಅನೇಕ ನಿಯಮಾವಳಿಗಳ ಪ್ರಕಾರ ಗಣೇಶೋತ್ಸವ ಆಚರಿಸಲಾಗುತ್ತಿದೆ. ಸುಮಾರು 5 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಕೇವಲ 6 ದಿನಗಳಿಗೆ ಮಾತ್ರ ಸೀಮಿತವಾಗುವಂತೆ ಗಣೇಶೋತ್ಸವ ಮಾಡಲು ನಿರ್ಧರಿಸಲಾಗಿದೆ. ಅಲ್ಲದೇ ಅದ್ಧೂರಿ ಮೆರವಣಿಗೆಯೊಂದಿಗೆ ಗಣೇಶ ಮೂರ್ತಿಯನ್ನು ಕೆರೆಯಲ್ಲಿ ನಿಮಜ್ಜನ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಗಣಪತಿ ಪೆಂಡಾಲ್ ಆವರಣದಲ್ಲಿಯೇ ಮೂರ್ತಿಯನ್ನು ನಿಮಜ್ಜನ ಮಾಡಲು ಮಂಡಳಿಯು ನಿರ್ಧರಿಸಿದೆ. ಇದು ತುಮಕೂರಿನ ಗಣೇಶನ ಭಕ್ತರಿಗೆ ನಿರಾಸೆ ಮೂಡಿಸಿದೆ.
![Tumkur](https://etvbharatimages.akamaized.net/etvbharat/prod-images/kn-tmk-03-ganesha-pkg-7202233_24082020140900_2408f_01040_344.jpg)
ಪ್ರತೀ ವರ್ಷ ಗಣೇಶೋತ್ಸವದ ವೇಳೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಎಲ್ಲದಕ್ಕೂ ಬ್ರೇಕ್ ಹಾಕಲಾಗಿದೆ. ಕೇವಲ 6 ದಿನಗಳು ಮಾತ್ರ ನಿತ್ಯ ಪೂಜೆ, ಮಹಾಮಂಗಳಾರತಿ ನೆರವೇರಿಸಲಾಗುತ್ತದೆ.