ತುಮಕೂರು: ಕೋವಿಡ್ ಆತಂಕದ ನಡುವೆಯೂ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ಕ್ಷೇತ್ರದಾದ್ಯಂತ 330 ಮಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಕೊರೊನಾ ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ಪ್ರತಿ ಮತಗಟ್ಟೆಗೆ ಓರ್ವ ಆರೋಗ್ಯ ಸಿಬ್ಬಂದಿ ನೇಮಿಸಲಾಗುತ್ತಿದೆ. ಎಲ್ಲ ಮತಗಟ್ಟೆಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದ್ದು, ಕೊರೊನಾ ಮುನ್ನೆಚ್ಚರಿಕೆ ಬಗ್ಗೆ ನಿಗಾವಹಿಸಲು ಆರೋಗ್ಯಧಿಕಾರಿ ನಿರಂತರವಾಗಿ ನವೆಂಬರ್ 3 ರಂದು ಗಸ್ತು ತಿರುಗಲಿದ್ದಾರೆ.
ನವೆಂಬರ್ 3 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಒಟ್ಟು 2,15,625 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಅದರಲ್ಲಿ1,10,281 ಪುರುಷರು, 1,05,434 ಮಹಿಳೆಯರು ಮತ ಹಾಕಲಿದ್ದಾರೆ. 64 ಕ್ರಿಟಿಕಲ್ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಈ ಮತಗಟ್ಟೆಯಲ್ಲಿ ಮೈಕ್ರೋ ಅಬ್ಸರ್ವರ್ ವಿಡಿಯೋಗ್ರಫಿ, ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಮತದಾನದ ವೇಳೆ 397 ಪ್ರಿಸೈಡಿಂಗ್ ಅಧಿಕಾರಿಗಳು ಮತ್ತು 1,588 ಮತಗಟ್ಟೆ ಸಿಬ್ಬಂದಿಯನ್ನು ಮತ್ತು 1,588 ಮತಗಟ್ಟೆ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.
ಶಾಂತಿಯುತ ಮತದಾನಕ್ಕಾಗಿ ನವೆಂಬರ್ 3ರ ಮಧ್ಯರಾತ್ರಿ 12 ಗಂಟೆಯವರೆಗೆ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
80 ವರ್ಷ ಮೇಲ್ಪಟ್ಟ ಮತ್ತು ವಿಕಲಚೇತನ ಹಾಗೂ ಕೊರೊನಾ ಸೋಂಕಿತರ ಅನುಕೂಲಕ್ಕಾಗಿ ಚುನಾವಣಾ ಆಯೋಗದ ನಿರ್ದೇಶನದಂತೆ ಅಂಚೆ ಮತಪತ್ರಗಳನ್ನು ನೀಡಲಾಗಿತ್ತು. ಅದರಲ್ಲಿ 80 ವರ್ಷ ಮೇಲ್ಪಟ್ಟ 2,674 ಮತದಾರರು, ಅಂಗವಿಕಲರು 2042 ಮತ್ತು 105 ಮಂದಿ ಕೋವಿಡ್ ಸೋಂಕಿತರು ಸೇರಿದಂತೆ 4,821 ಮಂದಿ ಮತದಾರರು ಅಂಚೆ ಮತಪತ್ರದ ಮೂಲಕ ಮತಚಲಾವಣೆ ಮಾಡಿದ್ದಾರೆ.
ಶಿರಾ ವಿಧಾನಸಭಾ ಕ್ಷೇತ್ರದ ಸುತ್ತಲೂ 10 ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ. ಈ ಮೂಲಕ ಚುನಾವಣಾ ಅಕ್ರಮಗಳನ್ನು ತಡೆಯಲು ಕ್ರಮಕೈಗೊಳ್ಳಲಾಗಿದೆ. ಶಾಂತಿಯುತ ಮತದಾನಕ್ಕೆ ಇಬ್ಬರು ಡಿವೈಎಸ್ಪಿ, ಐವರು ಇನ್ಸ್ ಪೆಕ್ಟರ್, 21 ಪಿ ಎಸ್ ಐ, 19 ಎ ಎಸ್ ಐ ಸೇರಿದಂತೆ 900 ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಭದ್ರತಾ ದೃಷ್ಟಿಯಿಂದ ನಿಯೋಜಿಸಲಾಗುತ್ತದೆ.
ತುಮಕೂರು ನಗರದಲ್ಲಿ ಮತಎಣಿಕೆ
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಮತದಾನದ ನಂತರ ಇವಿಎಂ ಗಳನ್ನು ತುಮಕೂರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಮತ ಎಣಿಕಾ ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದು. ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಮತಯಂತ್ರಗಳನ್ನು ಇರಿಸಲಾಗುವುದು. ನವೆಂಬರ್ 10 ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭವಾಗಲಿದೆ ಎಂದು ಅವರು ತಿಳಿಸಿದರು