ತುಮಕೂರು : ಜಿಲ್ಲೆಯಲ್ಲಿ ಹೆಚ್ಚಿನ ಜನರು ಮೇಕೆ ಹಾಗೂ ಕುರಿಗಳ ಸಾಕಾಣಿಕೆ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಆದ್ರೆ, ವಿವಿಧ ಕಾಯಿಲೆಗಳಿಂದಾಗಿ ಸಾವನ್ನಪ್ಪುತ್ತಿರುವ ಕುರಿಗಳನ್ನು ಕಂಡು ಕುರಿಗಾಹಿಗಳಿಗೆ ದಿಕ್ಕೇ ತೋಚದ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಹೆಚ್ಚಾಗಿ ಪಿಪಿಆರ್ (ಹೀರೇಬೇನೆ) ರೋಗದಿಂದ ಕುರಿಗಳು ಸಾವನ್ನಪ್ಪುತ್ತಿರುವುದಾಗಿ ದೃಢಪಟ್ಟಿದೆ. ಜಿಲ್ಲೆಯ ಪಾವಗಡ, ಶಿರಾ, ಚಿಕ್ಕನಾಯಕನಹಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಕುರಿಗಳು ರೋಗಬಾಧೆಯಿಂದ ಬಳಲುತ್ತಿವೆ. ಇನ್ನು, ರೋಗ ಬಾಧೆಯಿಂದ ಬಳಲುತ್ತಿರುವ ಕುರಿಗಳನ್ನು ಉಳಿಸಿಕೊಳ್ಳಲು ಕುರಿಗಾಯಿಗಳು ಹರಸಾಹಸ ಪಡುತ್ತಿದ್ದಾರೆ. ಸೂಕ್ತ ಮಾಹಿತಿ ಹಾಗೂ ಸಲಹೆ ಇಲ್ಲದೆ ಕಂಗಾಲಾಗಿದ್ದಾರೆ.
ಈಗಾಗಲೇ ಪಾವಗಡ ತಾಲೂಕಿನ ಸುಜನಾಡು, ಪಾವಗಡ ತಾಲೂಕಿನ ಬ್ರಹ್ಮಸಂದ್ರ, ಗೊಲ್ಲರಹಟ್ಟಿ, ತೋವಿನಕೆರೆ ಸೇರಿ ವಿವಿಧೆಡೆಯಿಂದ ರೋಗದಿಂದ ಬಳಲುತ್ತಿದ್ದ ಕುರಿಗಳ ಮಾಹಿತಿಯನ್ನು ಪಶುಪಾಲನಾ ಇಲಾಖೆ ಸಂಗ್ರಹಿಸಿದೆ.
ರೋಗ ವ್ಯಾಪಿಸುವ ಮುನ್ನ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಳ್ಳಬೇಕು, ಅಷ್ಟೇ ಅಲ್ಲ, ಇದಕ್ಕೆ ಕಡಿವಾಣ ಹಾಕುವ ಮೂಲಕ ಕುರಿಗಾರರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕಿದೆ.
ಈ ಸುದ್ದಿಯನ್ನೂ ಓದಿ: 2020ರ ನೂತನ ಕೈಗಾರಿಕಾ ನೀತಿ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುತ್ತದೆ : ಸಿಎಂ ಬಿಎಸ್‌ವೈ
ಕುರಿಗಾಹಿಗಳಿಗೆ ತಮ್ಮ ಕುರಿಗಳನ್ನು ಈ ರೋಗದಿಂದ ಮುಕ್ತಗೊಳಿಸಲು ಚಿಕಿತ್ಸೆಯ ಸಲಹೆ ಮಾಡಲಾಗುತ್ತಿದೆ ಎಂದು ಪಶುರೋಗ ತನಿಖಾ ಪ್ರಯೋಗಾಲಯದ ಸಂಶೋಧನೆ ಅಧಿಕಾರಿ ಡಾಕ್ಟರ್ ಜಿ ಆರ್ ಪ್ರವೀಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ, ಕುರಿಗಾಯಿಗಳಿಗೆ ಪೂರಕ ಸಲಹೆ ಹಾಗೂ ಸೌಲಭ್ಯ ಲಭಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತುಮಕೂರು ಜಿಲ್ಲೆಗೆ ಬಂದು ನಿರಂತರ ಪರಿಶೀಲನೆ ನಡೆಸಬೇಕಿದೆ ಎಂದು ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ ತಿಳಿಸಿದ್ದಾರೆ.