ತುಮಕೂರು: ಜಿಲ್ಲೆಯಲ್ಲೊಂದು ಅಗಾಧವಾದ ಔಷಧೀಯ ಗುಣಗಳ ಸಸ್ಯರಾಶಿಯನ್ನು ಒಳಗೊಂಡಿರುವ ಅಪರೂಪದ ಶಿಖರವಿದೆ. ಈ ಬೆಟ್ಟವನ್ನು ಹತ್ತಿದರೆ ಎಲ್ಲೆಂದರಲ್ಲಿ ಆಯುರ್ವೇದಿಕ್ ಔಷಧೀಯ ಗುಣಗಳುಳ್ಳ ಮರಗಿಡಗಳು ಕಾಣಸಿಗುತ್ತವೆ. ಇಲ್ಲಿ 900 ಔಷಧೀಯ ಸಸ್ಯಗಳಿವೆ.
ಇಂತಹುದೊಂದು ಶಿಖರ ಕಾಣಸಿಗುವುದು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನಲ್ಲಿ. ಇದರ ಹೆಸರು ಸಿದ್ದರಬೆಟ್ಟ, ಸುಮಾರು 6600 ಅಡಿ ಎತ್ತರದವರೆಗೂ ಚಾಚಿಕೊಂಡಿದೆ. ಶತಮಾನಗಳಿಂದಲೂ ಈ ಸಿದ್ದರಬೆಟ್ಟ ಹಲವು ಔಷಧೀಯ ಗುಣಗಳ ಸಸ್ಯಗಳನ್ನು ತನ್ನ ಗರ್ಭದಲ್ಲಿ ಹುದುಗಿಸಿಕೊಂಡು ಜತನದಿಂದ ಕಾಪಾಡಿಕೊಂಡು ಬಂದಿದೆ. ಈ ಬೆಟ್ಟ ಸಂಜೀವಿನಿ ಬೆಟ್ಟ ಮತ್ತು ರಸ ಸಿದ್ದರಬೆಟ್ಟ ಎಂಬ ನಾಮಾಂಕಿತದಿಂದ ಪ್ರಚಲಿತಗೊಂಡಿದೆ.
ಈ ಗಿರಿ ಶಿಖರದಲ್ಲಿ ಸಂಜೀವಿನಿ ಕೂಡ ಇದೆ ಎಂಬ ಹಿನ್ನೆಲೆಯಲ್ಲಿ ಇದನ್ನು ಸಂಜೀವಿನ ಬೆಟ್ಟ ಎಂದು ಕರೆಯಲಾಗುತ್ತಿದೆ. ಈ ಸಿದ್ದರಬೆಟ್ಟದ ಕುರಿತು ಅಧ್ಯಯನ ನಡೆಸಿರುವಂತಹ ಕೇಂದ್ರ ಸರ್ಕಾರದ ವಿಶೇಷ ವೈದ್ಯರ ತಂಡ , ಈ ಗಿರಿಶಿಖರ ಒಂದರಲ್ಲೇ 900 ಅಪರೂಪದ ಔಷಧೀಯ ಗುಣ ಹೊಂದಿದ ಸಸ್ಯಗಳಿವೆ ಎಂದು ಘೋಷಿಸಿದೆ. ಅಲ್ಲದೆ ಇನ್ನಷ್ಟು ಔಷಧೀಯ ಗುಣ ಹೊಂದಿದ ಸಸ್ಯಗಳ ಕುರಿತು ನಿರಂತರವಾಗಿ ಅಧ್ಯಯನ ನಡೆಸುತ್ತಿದೆ.
ಬೆಟ್ಟಕ್ಕೆ ಭೇಟಿ ನೀಡುವ ಭಕ್ತರು ಕೂಡ ಈ ಸಸ್ಯ ಸಂಪತ್ತನ್ನು ಸಂರಕ್ಷಿಸುವ ಜವಾಬ್ದಾರಿ ವಹಿಸಬೇಕಿದೆ ಕಡಿದು ಹಾಕಬಾರದು ಎನ್ನುತ್ತಾರೆ ಸಿದ್ದರಬೆಟ್ಟದ ಬಾಳೆಹೊನ್ನೂರು ಶಾಖಾಮಠದ ವೀರಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮೀಜಿ. ನಿತ್ಯ ಇಲ್ಲಿಗೆ ಬರುವಂತಹ ಭಕ್ತರು ಹಾಗೂ ಕೆಲವು ಪಾರಂಪರಿಕ ವೈದ್ಯರು ಇಲ್ಲಿರುವಂತಹ ಔಷಧೀಯ ಸಸ್ಯಗಳನ್ನು ತೆಗೆದುಕೊಂಡು ಹೋಗುತ್ತಾರೆ.
ಕೆಲ ರೈತರು ತಮ್ಮ ಜಾನುವಾರುಗಳ ಮತ್ತು ಕುರಿ ಮೇಕೆಗಳಿಗೆ ಪೂರಕವಾದಂತಹ ಔಷಧೀಯ ಸಸ್ಯಗಳ ಎಲೆಗಳನ್ನು ಕಿತ್ತುಕೊಂಡು ಹೋಗುತ್ತಾರೆ. ಬೆಟ್ಟದಲ್ಲಿ ಮಧುನಾಶಿನಿ, ನೇಪಥ್ಯಕ್ಕೆ ಸರಿಯುತ್ತಿರುವ ಜಾಲಾರಿ ಗಿಡ, ಬಹು ಮುಖ್ಯವಾಗಿ ಕ್ಯಾನ್ಸರ್ ರೋಗ ನಿವಾರಿಸುವಂತಹ ಬಗೆ ಬಗೆಯ ಸಸ್ಯರಾಶಿ ಇರುವುದನ್ನು ಕಾಣಬಹುದಾಗಿದೆ. ಒಟ್ಟಾರೆ ದೇಶದಲ್ಲಿಯೇ ಇಂತಹ ಅಪರೂಪದ ಔಷಧೀಯ ಸಸ್ಯರಾಶಿ ಹೊಂದಿರುವ ಸಿದ್ದರಬೆಟ್ಟದ ಸಂರಕ್ಷಣೆ ಮಾಡುವುದು ಕೂಡ ಅಷ್ಟೇ ಪ್ರಮುಖವಾಗಿದೆ.