ಬೆಂಗಳೂರು: ಮೊದಲನೇ ಗಂಡನನ್ನು ಕೊಲ್ಲಲು ಎರಡನೇ ಗಂಡನಿಗೆ ಕುಮ್ಮಕ್ಕು ಕೊಟ್ಟ ಮಹಿಳೆಯೊಬ್ಬಳು ಜೈಲು ಸೇರಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.
ಅಪರಾಧ ಪ್ರಕರಣವೊಂದರಲ್ಲಿ ಜೈಲಿನಲ್ಲಿದ್ದ ಗಂಡನ ಕುಶಲೋಪರಿ ವಿಚಾರಿಸಲು ಹೆಂಡತಿ ಆಗಾಗ ಜೈಲು ಬಳಿ ಹೋಗಿ ಬರುತ್ತಿದ್ದಳು. ಈ ವೇಳೆ ಜೈಲಿನಲ್ಲೇ ಮತ್ತೊಬ್ಬ ರೌಡಿಶೀಟರ್ನ ಪ್ರೇಮ ಪಾಶಕ್ಕೆ ಬೀಳುವ ಮೂಲಕ ಆತನನ್ನು ಎರಡನೇ ಮದುವೆಯಾಗಿದ್ದಾಳೆ.
ಜೈಲಿನಿಂದ ಬಿಡುಗಡೆಯಾಗಿ ಹೊರಬಂದ ಮೊದಲ ಗಂಡ, ತನ್ನ ಹೆಂಡತಿ ಬೇರೆ ಮದುವೆಯಾಗಿರುವ ವಿಚಾರ ತಿಳಿದು ಜಗಳ ತೆಗೆದಿದ್ದನು. ಇದಕ್ಕೆ ಅಕ್ರೋಶಗೊಂಡ ಪತ್ನಿ, ಮೊದಲ ಪತಿಯನ್ನು ಸಾಯಿಸಲು ಎರಡನೇ ಗಂಡನ ಮೂಲಕ ಕುಮ್ಮಕ್ಕು ನೀಡಿ ಮಾರಣಾಂತಿಕ ಹಲ್ಲೆಗೆ ಕಾರಣಳಾಗುವ ಮೂಲಕ ಇದೀಗ ಜೈಲುಪಾಳಾಗಿದ್ದಾಳೆ.
ನಗರದ ಸಜ್ಜಾದ್, ಶಾಜೀಯಾ ಹಾಗೂ ಫಹೀಮಾ ಬಂಧಿತ ಆರೋಪಿಗಳು. ಪ್ರಕರಣದಲ್ಲಿ ರೌಡಿಶೀಟರ್ ಮೆಹರಾಜ್ ಖಾನ್ ಸೇರಿ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀದೇವಿ ನಗರ ನಿವಾಸಿಯಾಗಿರುವ ಶಾಜೀಯಾ, ಐದು ವರ್ಷಗಳ ಹಿಂದೆ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ಹಿದಾಯತ್ ಎಂಬುವನೊಂದಿಗೆ ಮದುವೆ ಮಾಡಿಕೊಂಡಿದ್ದಳು. ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಈ ನಡುವೆ ಅಪರಾಧ ಪ್ರಕರಣದಲ್ಲಿ ಎರಡು ವರ್ಷ ಹಿದಾಯತ್ ಜೈಲು ಸೇರಿದ್ದ.
ಈ ವೇಳೆ ಪತ್ನಿ ಒಂಟಿಯಾಗಿದ್ದಾಳೆ. ಗಂಡನನ್ನು ನೋಡಲು ಆಗಾಗ ಜೈಲಿಗೆ ಭೇಟಿ ನೀಡಿ ಕುಶಲೋಪರಿ ವಿಚಾರಿಸುತ್ತಿದ್ದಳು. ಕ್ರೈಂ ಕೇಸ್ವೊಂದರಲ್ಲಿ ಭಾಗಿಯಾದ ಆರೋಪದಡಿ ಜೈಲು ಸೇರಿದ್ದ ಕೆ.ಜಿ.ಹಳ್ಳಿ ಠಾಣೆಯ ರೌಡಿಶೀಟರ್ ಮೆಹರಾಜ್ ಖಾನ್ ಪರಿಚಯವಾಗಿ ಪ್ರೀತಿಗೆ ತಿರುಗಿತ್ತು. ಜಾಮೀನಿನ ಮೇಲೆ ರೌಡಿಶೀಟರ್ ಹೊರಬರುತ್ತಿದ್ದಂತೆ ಶಾಜೀಯಾಳನ್ನು ವರಿಸಿದ್ದಾನೆ.
ಎರಡು ವರ್ಷ ಬಳಿಕ ಬಂದ ಮೊದಲನೇ ಗಂಡ ಹಿದಾಯತ್ಗೆ ತನ್ನ ಪತ್ನಿ ಎರಡನೇ ಮದುವೆಯಾಗಿದ್ದಾಳೆ ಎಂದು ವಿಷಯ ತಿಳಿದು ದೌರ್ಜನ್ಯ ನಡೆಸುತ್ತಿದ್ದ. ಇದೇ ಸಿಟ್ಟನ್ನು ಮನದಲ್ಲಿಟ್ಟುಕೊಂಡು ಎರಡನೇ ಗಂಡನ ಮೆಹರಾಜ್ ಹಾಗೂ ಆತನ ಸಹಚರರಿಂದ ಕಳೆದ ತಿಂಗಳು 26ರಂದು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ.
ಬಂಧಿತ ಆರೋಪಿಗಳ ಪೈಕಿ ಸಜ್ಜದ್, ಒಂಟಿ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ. ಸಾರ್ವಜನಿಕರಿಗೆ ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದ. ಸುಲಿಗೆಯಿಂದ ಬಂದ ಚಿನ್ನಾಭರಣವನ್ನು ಮತ್ತೋರ್ವ ಮಹಿಳಾ ಆರೋಪಿ ಫಹೀಮಾ ಗಿರವಿ ಇಟ್ಟು ಹಣ ಬಿಡಿಸಿಕೊಳ್ಳುವ ಜವಾಬ್ದಾರಿ ವಹಿಸಿಕೊಂಡಿದ್ದಳು. ಪ್ರಕರಣದ ಹಿಂದೆ ದೊಡ್ಡ ಗ್ಯಾಂಗ್ ಇದ್ದು, ಪತ್ತೆ ಹಚ್ಚುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.