ತುಮಕೂರು: ''ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಧಾರ್ಮಿಕ ಆಚರಣೆ ಹೇಗಿರಬೇಕು ಎನ್ನುವ ಕುರಿತು ಸರ್ಕಾರದ ಬ್ಲೂ ಬುಕ್ನಲ್ಲಿ ತಿಳಿಸಲಾಗಿದೆ. ಅದರ ಪ್ರಕಾರ ಏನಿರುತ್ತೊ ಅದೇ ನಡೆಯಬೇಕು. ಗೃಹ ಇಲಾಖೆಯಲ್ಲಿ ನಾನೊಂದು ಕಾನೂನು ಮಾಡಲು ಬರಲ್ಲ. ಇನ್ನೊಬ್ಬರು ಇನ್ನೊಂದು ಕಾನೂನು ಮಾಡಲು ಆಗಲ್ಲ'' ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ''ಯಾವುದನ್ನು ಮಾಡಬಾರದು, ಯಾವುದನ್ನು ಮಾಡಬೇಕು ಎಂಬ ಬಗ್ಗೆ ಸರ್ಕಾರದ ನಿಯಮಗಳಿವೆ'' ಎಂದ ಅವರು, ''ಪೊಲೀಸ್ ಇಲಾಖೆಯಲ್ಲಿ ಮಾನ್ಯೂಯಲ್ ಇದೆ. ಅದನ್ನು ಬಿಟ್ಟು ಬೇರೆ ಮಾಡಲು ಬರೋದಿಲ್ಲ. ಹಿರಿಯ ಅಧಿಕಾರಿಗಳು ಮಾನ್ಯೂಯಲ್ ಅನುಷ್ಠಾನ ಮಾಡುತ್ತಾರೆ. ನಾನು ವೈಯಕ್ತಿಕವಾಗಿ ಸಚಿವನಾಗಿದ್ದೇನೆ ಅಂತ ಪ್ರತ್ಯೇಕ ಕಾನೂನು ಮಾಡಲು ಬರಲ್ಲ. ಕುಂಕುಮ, ವಿಭೂತಿ, ಇಟ್ಟುಕೊಳ್ಳಬಾರದು ಅಂತ ಹೇಳಿದ್ದೇನೆ ಅಂತ ವೈರಲ್ ಮಾಡಿದ್ದಾರೆ. ಅದನ್ನು ನಾನು ಹೇಳಿಯೇ ಇಲ್ಲ. ಯಾರು ವೈರಲ್ ಮಾಡಿದ್ದಾರೋ ಅವರನ್ನು ಹುಡುಕುತ್ತಿದ್ದೇವೆ. ಇಂತಹವನ್ನೆಲ್ಲ ಸುಮ್ಮನೆ ಬಿಡೋಕೆ ಆಗಲ್ಲ'' ಎಂದರು.
ಸುಳ್ಳು ಸುದ್ದಿ ಹರಡಬಾರದು- ಪರಮೇಶ್ವರ್: ''ನನಗೆ ಪ್ರಜ್ಞೆ ಇದೆ, ನಾನು ಮೂರು ಬಾರಿ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ನಾನು ಗೃಹ ಸಚಿವನಾಗಿದ್ದಾಗ ಒಂದು ಕಾನೂನು ಮಾಡಲು ಹೋಗುವುದು, ಮತ್ತೊಬ್ಬರು ಇನ್ನೊಂದು ಕಾನೂನು ಮಾಡಲು ಅವಕಾಶವಿಲ್ಲ'' ಎಂದ ಅವರು, ''ಸುಳ್ಳು ಸುದ್ದಿಗಳನ್ನು ಮಾಡಬಾರದು, ರಾಜ್ಯದಲ್ಲಿ ಶಾಂತಿ ಹಾಳಾಗುತ್ತದೆ. ಪ್ರಚೋದನೆಯಾಗುತ್ತದೆ. ರಾಜ್ಯದಲ್ಲಿ ಕೋಮು ಪ್ರೇರಿತ ಗಲಾಟೆಗಳು ಆಗಬಾರದು ಎಂಬುದು ನಮ್ಮ ನಿರೀಕ್ಷೆ, ಅಪೇಕ್ಷೆ. ನಮ್ಮ ಪ್ರಣಾಳಿಕೆ ಶೀರ್ಷಿಕೆಯಲ್ಲೇ ಸರ್ವ ಜನಾಂಗದ ಶಾಂತಿಯ ತೋಟ ಮಾಡ್ತೀವಿ ಅಂತಾ ಹೇಳಿದ್ದೇವೆ. ಎಲ್ಲರೂ ಶಾಂತಿಯಿಂದ ಬಾಳೋಣ ಅನ್ನೋದು ನಮ್ಮ ಅಪೇಕ್ಷೆ'' ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ವರ್ಗವಣೆ ದಂಧೆ ಶುರುವಾಗಿದೆ. ನಾವು ಪೇ ಸಿಎಂ ಪೋಸ್ಟರ್ ಅಂಟಿಸುತ್ತೇವೆ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ''ಅವರಿಗೇನಾದರೂ ಅಂತಹದ್ದು ಮಾಹಿತಿ ಇದ್ರೆ ಅಂಟಿಸಲಿ. ಅವರಿಗೆ ಯಾಕೆ ಬ್ಯಾಡ ಅನ್ನಲಿ'' ಎಂದರು.
''ಈಗಾಗಲೇ ಕೇರಳಕ್ಕೆ ಮಾನ್ಸೂನ್ ಪ್ರವೇಶವಾಗಿದೆ. ಶೀಘ್ರದಲ್ಲಿ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮೂರನೇ ಬಾರಿ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ವಹಿಸಿಕೊಂಡಿದ್ದೇನೆ. ಸಿಎಂ ಎಲ್ಲಾ ಸಚಿವರಿಗೂ ಉಸ್ತುವಾರಿಯನ್ನು ಕೊಟ್ಟಿದ್ದಾರೆ. ಜಿಲ್ಲೆಯ ಅಭಿವೃದ್ಧಿ, ಶಾಂತಿ ಕಾಪಾಡುವ ಜವಾಬ್ದಾರಿ ಉಸ್ತುವಾರಿಗಳಿರುತ್ತೆ. ಪ್ರತಿ ಜಿಲ್ಲೆಯಲ್ಲೂ ಒಂದೊಂದು ಸಮಸ್ಯೆ ಇರುತ್ತೆ. ಮಳೆ, ಪ್ರವಾಹದಿಂದ ಬೆಳೆ ಹಾನಿ, ಕೆಲ ಜಿಲ್ಲೆಗಳಲ್ಲಿ ಮಳೆಯಾಗದೇ ನೀರಿನ ಸಮಸ್ಯೆ ಇರುತ್ತದೆ. ಜಿಲ್ಲೆಯ ಸಮಸ್ಯೆಗಳಿಗೆ ತಕ್ಕಂತೆ ಸಚಿವರುಗಳು ಕ್ರಮ ಕೈಗೊಳ್ಳಬೇಕು'' ಎಂದು ನುಡಿದರು. ''ರೈತರಿಗೆ ಬೇಕಾದ ಗೊಬ್ಬರ, ಬಿತ್ತನೆ ಬೀಜವನ್ನು ಸಮರ್ಪಕವಾಗಿ ಸರಬರಾಜು ಮಾಡುವ ನಿಟ್ಟಿನಲ್ಲಿ ಸಿಎಂ ಕ್ರಮ ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿ ಕೊಬ್ಬರಿ ಬೆಲೆ ಇಳಿಕೆಯಿಂದ ರೈತರಿಗೆ ಸಮಸ್ಯೆಯಾಗಿದೆ'' ಎಂದು ಹೇಳಿದರು.
ಇದನ್ನೂ ಓದಿ: ಸಂವಿಧಾನ ಬದಲಿಸಲು ಬಂದವರನ್ನೇ ಬದಲಾಯಿಸಿದ್ದೇವೆ, 2024ರ ಲೋಕಸಭೆ ಚುನಾವಣೆಯಲ್ಲೂ ಇದು ಮರುಕಳಿಸಲಿ: ಸಿಎಂ ಸಿದ್ದರಾಮಯ್ಯ