ತುಮಕೂರು: ರಾಮಲಿಂಗಾರೆಡ್ಡಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೆಲ್ಲಾ ಸಚಿವರಾಗಿ ಕೆಲಸ ಮಾಡಿದವರು. ಈ ಬಾರಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ದೊರೆಯಲಿಲ್ಲ ಎಂದು ರಾಜೀನಾಮೆ ಕೊಟ್ಟು ಹೋಗುತ್ತಾರೆ ಎಂದರೆ ಅವರಿಗೆ ಯಾವ ಪಕ್ಷದ ಸಿದ್ಧಾಂತ ಮತ್ತು ನೈತಿಕತೆ ಗೊತ್ತಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಆರ್ ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಇದ್ದರೂ ಇರಬಹುದು ಅಥವಾ ಹೋದರೂ ಹೋಗಬಹುದು. ಆದ್ರೆ ರಾಜೀನಾಮೆ ಕೊಟ್ಟಿರುವ ಶಾಸಕರಿಗೆಲ್ಲ ಅಧಿಕಾರದ ಆಸೆ ಇದೆ ಎಂದು ಆರೋಪಿಸಿದರು. ರಾಮಲಿಂಗಾರೆಡ್ಡಿ ಅವರು ನಮ್ಮ ನಾಯಕರು ಎಂದು ರಾಜೀನಾಮೆ ನೀಡಿರುವ ಮುನಿರತ್ನ ಹೇಳಿದ್ದಾರೆ. ಹೀಗಾಗಿ ಇದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ಏಕೆ ಎಳೆದು ತರಬೇಕು ಎಂದರು.
ಶಿಕ್ಷಣ ಕ್ಷೇತ್ರವನ್ನು ಸಚಿವ ಶ್ರೀನಿವಾಸ್ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಹೆಚ್. ವಿಶ್ವನಾಥ್ ಹೇಳಿಕೆ ನೀಡಿದ್ದಾರೆ. ವಿಶ್ವನಾಥ್ ಅವರೇ ಸಚಿವರಾಗಿ ಕೆಲಸ ಮಾಡುವುದಾದರೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಶ್ರೀನಿವಾಸ್ ಘೋಷಿಸಿದರು.
ಇನ್ನು ವ್ಯವಸ್ಥೆ ಬಗ್ಗೆ ಮತ್ತು ಸರ್ಕಾರದ ಬಗ್ಗೆ ಅಸಮಾಧಾನವಿದೆ ಎಂದು ರಾಜೀನಾಮೆ ಕೊಟ್ಟಿರುವ ಶಾಸಕರು ಸೀದಾ ಮನೆಗೆ ಹೋಗಬೇಕು. ಆಕಸ್ಮಾತ್ ಯಾವುದಾದರೂ ಪಕ್ಷಕ್ಕೆ ಸೇರಿದರೆ ಅವರು ಹಣಕ್ಕಾಗಿ ಅಥವಾ ಅಧಿಕಾರಕ್ಕಾಗಿ ಈ ಕೆಲಸ ಮಾಡಿದ್ದಾರೆ ಎಂಬುದನ್ನು ಜನರೇ ನಿರ್ಧರಿಸಲಿದ್ದಾರೆ ಎಂದು ಸಚಿವರು ಹೇಳಿದ್ರು.