ತುಮಕೂರು: ಶಿವಮೊಗ್ಗ ಹಾಗೂ ಹಾವೇರಿಯಲ್ಲಿ ನಡೆಯುತ್ತಿರುವ 'ರೈತ ಮಹಾಪಂಚಾಯತ್' ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದ ದೆಹಲಿ ರೈತ ಹೋರಾಟದ ನಾಯಕ, ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಸಿಂಗ್ ಟಿಕಾಯತ್ ಅವರು ಮಾರ್ಗಮಧ್ಯೆ ತಿಪಟೂರು ನಗರದ ಎಪಿಎಂಸಿಗೆ ಭೇಟಿ ನೀಡಿದ್ದರು.
ತಿಪಟೂರು ಎಪಿಎಂಸಿ ಬಳಿ ರೈತ ಸಂಘದ ಮುಖಂಡರು ಅವರಿಗೆ ಎಳನೀರು ಕೊಟ್ಟು ಬರಮಾಡಿಕೊಂಡರು. ಇದೇ ವೇಳೆ ನೆರೆದಿದ್ದ ರೈತ ಮುಖಂಡರು ಜೈ ಜವಾನ್, ಜೈ ಕಿಸಾನ್ ಎಂಬ ಘೋಷಣೆಗಳನ್ನು ಕೂಗಿದರು.
ಇದೇ ವೇಳೆ ಮಾತನಾಡಿದ ಟಿಕಾಯತ್, ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಇರುವ ರೈತರಿಗೆ ಕೇಂದ್ರದ ನೂತನ ಕೃಷಿ ಮಸೂದೆಯಿಂದ ಯಾವ ಸಮಸ್ಯೆ ಎದುರಾಗಲಿದೆ ಎಂಬುದನ್ನು ಮನವರಿಕೆ ಮಾಡಿಕೊಡಲು ಆಂದೋಲನ ನಡೆಸಲಾಗುತ್ತಿದೆ. ದೆಹಲಿ ಸುತ್ತಲೂ ಪ್ರತಿಭಟನೆ ಮುಂದುವರೆದಿದೆ, ಆದ್ರೂ ಕೇಂದ್ರ ಸರ್ಕಾರ ಪೂರಕ ಮಾತುಕತೆ ನಡೆಸುತ್ತಿಲ್ಲ. ರೈತ ಸಮುದಾಯದಿಂದಲೂ ಆಂದೋಲನಕ್ಕೆ ಸಹಕಾರ ದೊರೆಯುತ್ತಿದೆ ಎಂದರು.
ಮೂರು ದಿನಗಳ ಕಾಲ ಕರ್ನಾಟಕ ಪ್ರವಾಸ ಮಾಡುತ್ತೇವೆ. ಹರಿಯಾಣ, ರಾಜಸ್ಥಾನ, ತಮಿಳುನಾಡಿನಲ್ಲಿಯೂ ಪ್ರವಾಸ ಕೈಗೊಳ್ಳುತ್ತೇವೆ. ಇದು ಬಹುದೊಡ್ಡ ಹೋರಾಟವಾಗಿದೆ. ರೈತರಿಗೆ ಪೆನ್ಷನ್ ಇಲ್ಲ, ಬದಲಾಗಿ ಶಾಸಕರು ಮತ್ತು ಸಂಸದರಿಗೆ ಇದೆ. ಅನೇಕ ಸರ್ಕಾರಿ ಸಂಸ್ಥೆಗಳ ಮಾರಾಟ ಮಾಡಲಾಗುತ್ತಿದ್ದು, ಅದನ್ನು ತಡೆಯಬೇಕಿದೆ. ರೈತರನ್ನು ಪಾರು ಮಾಡಬೇಕಿದೆ ಎಂದು ಟಿಕಾಯತ್ ಹೇಳಿದ್ರು.