ತುಮಕೂರು: ಜಿಲ್ಲೆಯಲ್ಲಿ ಮಳೆ ಆರ್ಭಟ ಹೆಚ್ಚಾಗಿದೆ. ಕೊರಟಗೆರೆ ತಾಲೂಕಿನ ಜಯಮಂಗಲಿ ನದಿ ಉಕ್ಕಿ ಹರಿಯುತ್ತಿದ್ದು, ನದಿಗೆ ಹೊಂದಿಕೊಂಡಂತೆ ಇರುವ ಚನ್ನಸಾಗರ ಗ್ರಾಮ ಸಂಪೂರ್ಣ ಜಲಾವೃತವಾಗಿದೆ. ಹೀಗಾಗಿ, ಗ್ರಾಮಸ್ಥರೆಲ್ಲರೂ ಮನೆ ಬಿಟ್ಟು ಓಡಿ ಬಂದಿದ್ದಾರೆ. ಕೆಲ ಜನರು ಮನೆಗಳ ಮೇಲೆಯೇ ಆಶ್ರಯ ಪಡೆದಿದ್ದಾರೆ.
ಗ್ರಾಮಕ್ಕೆ ಡೌಡಾಯಿಸಿರುವ ಜಿಲ್ಲಾಧಿಕಾರಿ ಸೇರಿದಂತೆ ತಹಶೀಲ್ದಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಜೆಸಿಬಿಯಲ್ಲಿ ತೆರಳಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.
ನೀರಿನಲ್ಲಿ ಕೊಚ್ಚಿ ಹೋಗಿ ಯುವಕ ಮೃತ: ಕುಣಿಗಲ್ ತಾಲೂಕಿನ ಹುತ್ರಿದುರ್ಗ ಬಳಿಯ ಶಿವಪುರ ಗ್ರಾಮದಲ್ಲಿ ಯುವಕನೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುವ ಘಟನೆ ನಡೆದಿದೆ. ನಾಗರಾಜು (28) ಸಾವನ್ನಪ್ಪಿರುವ ಯುವಕ.
ಚಿಕ್ಕ ನಾಯಕನಹಳ್ಳಿ ತಾಲೂಕಿನ ಮಾದಾಪುರ ತಾಂಡದ ನಾಗರಾಜು ಚೆಕ್ ಡ್ಯಾಂ ನಿರ್ಮಾಣದ ಕೂಲಿ ಕೆಲಸಕ್ಕಾಗಿ ಬಂದಿದ್ದರು. ಶಿವಪುರ ಹಾಗೂ ದೀಪಾಂಬುದಿ ಕೆರೆ ತುಂಬಿ ರಭಸವಾಗಿ ಹರಿಯುತ್ತಿದ್ದ ಕಾಲುವೆಯಲ್ಲಿ ಜಾರಿ ಬಿದ್ದು ಸಾವನ್ನಪ್ಪಿದ್ದಾನೆ.
ಚೆಕ್ ಡ್ಯಾಂ ಕಾಮಗಾರಿಯ ಶೆಡ್ನಲ್ಲಿ ಮಲಗಿದ್ದ ವೇಳೆ ರಾತ್ರಿ ಮೂತ್ರ ವಿಸರ್ಜನೆಗೆಂದು ಹೊರ ಬಂದಿದ್ದಾರೆ. ಈ ಸಂದರ್ಭ ಕತ್ತಲಲ್ಲಿ ತಿಳಿಯದೆ ಈ ಘಟನೆ ಸಂಭವಿಸಿದೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಮಂಡ್ಯದಲ್ಲಿ ಧಾರಾಕಾರ ಮಳೆಗೆ ಗ್ರಾಮಗಳು ಜಲಾವೃತ.. ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್