ತುಮಕೂರು: ಯಾವ ಉದ್ದೇಶಕ್ಕಾಗಿ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡ್ತಾ ಇದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಹಿಂದಿನಿಂದಲೂ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡುವ ಕುರಿತು ಚರ್ಚೆ ನಡೆಯುತ್ತಿದೆ. ಅವರೊಂದಿಗೆ ಸಿಎಲ್ಪಿ ನಾಯಕ ಸಿದ್ದರಾಮಯ್ಯ ಕೂಡ ಮಾತನಾಡಿದ್ದಾರೆ ಎಂದರು.
ಅವರನ್ನು ಸಚಿವರನ್ನಾಗಿ ಕಾಂಗ್ರೆಸ್ ಮಾಡಿತ್ತು. ಬೆಳಗಾವಿ ಜಿಲ್ಲೆಯ ಜವಾಬ್ದಾರಿ ಕೊಡಲಾಗಿತ್ತು. ಒಂದು ರೀತಿ ಅರ್ಧ ಕರ್ನಾಟಕಕ್ಕೆ ಉಸ್ತುವಾರಿ ಸಚಿವರನ್ನಾಗಿ ಮಾಡಿದಂತಾಗಿತ್ತು. ಇದನ್ನೆಲ್ಲ ಹೊರತುಪಡಿಸಿ ಯಾವ ರಾಜಕೀಯ ಉದ್ದೇಶದಿಂದ ಅವರು ರಾಜೀನಾಮೆ ಕೊಡಬೇಕೆಂದು ಅಂದುಕೊಂಡಿದ್ದಾರೆ ಗೊತ್ತಿಲ್ಲ. ನಾನು ಅವರೊಂದಿಗೆ ಚರ್ಚೆ ಮಾಡುತ್ತೇನೆ ಎಂದರು.
ಪಕ್ಷದ ವತಿಯಿಂದ ಅಥವಾ ವೈಯಕ್ತಿಕ ಕಾರಣಗಳು ಏನಾದರೂ ಇದ್ದರೆ ಅದನ್ನು ಸರಿಪಡಿಸಲು ಪ್ರಯತ್ನಿಸುತ್ತೇವೆ. ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಲು ಹಲವು ಕಾರಣಗಳಿದ್ದವು. ಸತೀಶ್ ಜಾರಕಿಹೊಳಿ ಹಾಗೂ ರಮೇಶ್ ಜಾರಕಿಹೊಳಿ ನಡುವೆ ಹಲವು ಮನಸ್ತಾಪಗಳು ಇವೆ. ಕೆಲವು ಸಂದರ್ಭದಲ್ಲಿ ಅವರು ಒಟ್ಟಿಗೆ ಇರುತ್ತಾರೆ. ಈಗ ಬೇರೆ ಆಗಿದ್ದಾರೆ ಎಂದು ಹೇಳಿದರು.
ಆದರೆ ಪಕ್ಷದಲ್ಲಿ ಅವರಿಗೆ ಬೇರೆ ರೀತಿಯ ಜವಾಬ್ದಾರಿಗಳನ್ನು ಕೊಡಬಹುದು. ರಮೇಶ್ ಜಾರಕಿಹೊಳಿಯನ್ನು ಮಂತ್ರಿ ಸ್ಥಾನದಿಂದ ತೆಗೆದಿದ್ದೆ ಅವರ ರಾಜೀನಾಮೆಗೆ ಕಾರಣ ಎಂದರೆ ಹೈಕಮಾಂಡ್ ಚರ್ಚಿಸಲಿದೆ. ರಮೇಶ್ ಜಾರಕಿಹೊಳಿ ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕುವಲ್ಲಿ ಡಿ.ಕೆ.ಶಿವಕುಮಾರ್ ಹಸ್ತಕ್ಷೇಪ ಮಾಡಿಲ್ಲ ಎಂದರು. ಸರ್ಕಾರ ಬೀಳುತ್ತೆ ಎಂದು ಬಹಳ ಜನ ಆಸೆ ಇಟ್ಟುಕೊಂಡಿದ್ದಾರೆ. ಆದರೆ ಅದು ಸುಭದ್ರವಾಗಿರುತ್ತದೆ ಎಂದು ಹೇಳಿದರು.