ತುಮಕೂರು: ಬಿಜೆಪಿ ಕಾರ್ಯಕರ್ತರ ಪ್ರಚಾರದ ವೇಳೆ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಮಾಜಿ ಶಾಸಕ ಸುರೇಶ್ ಗೌಡ ಮೇಲೆ ಎಫ್ಐಆರ್ ದಾಖಲಾಗಿದೆ.
ಚುನಾವಣೆ ಕೆಲಸದ ಎಫ್ಎಸ್ಟಿ ಅಧಿಕಾರಿಯಾಗಿರುವ ಡಿ.ಜಯರಾಮಣ್ಣ ಎಂಬುವರು ನೀಡಿದ ದೂರಿನ ಮೇರೆಗೆ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಮಾರ್ಚ್ 28ರಂದು ಬೆಳಗ್ಗೆಹೊನಸಿಗೆರೆ ಗ್ರಾಮದಲ್ಲಿ ನಡೆದ ಚುನಾವಣೆ ಸಭೆಯಲ್ಲಿ ಚುನಾವಣಾ ಆದೇಶವನ್ನು ಉಲ್ಲಂಘಿಸಿ ಜೆಡಿಎಸ್ ವಿರುದ್ಧ ಮಾತನಾಡಿದ್ದರು. ಪಕ್ಷಗಳ ನಡುವೆ ವೈರತ್ವ, ದ್ವೇಷ ಹಾಗೂ ವೈಮನಸ್ಸು ಬರುವಂತೆ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಚುನಾವಣಾಧಿಕಾರಿಗೆ ಸಿಡಿ ಸಲ್ಲಿಸಲಾಗಿತ್ತು.
ಚುನಾವಣೆ ನೀತಿ ಸಂಹಿತೆ ಇದ್ದರೂ ಕೂಡ ಚುನಾವಣೆ ಶಾಖೆಯಿಂದ ಅನುಮತಿ ಪಡೆಯದೆ ಸಭೆಯನ್ನು ನಡೆಸಿದ್ದು, ಬೇರೆ ಪಕ್ಷದ ಮೇಲೆ ಪ್ರಚೋದನಕಾರಿ ರೀತಿಯಲ್ಲಿ ಮಾತನಾಡಿರುವುದು ಸಿಡಿಯಲ್ಲಿ ದಾಖಲಾಗಿದೆ. ಈ ಕುರಿತಂತೆ ಚುನಾವಣಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾರ್ಚ್ 30 ರಂದು ಹೆಬ್ಬೂರು ಪೊಲೀಸ್ ಠಾಣೆಗೆ ತೆರಳಿ ಮಾಜಿ ಶಾಸಕ ಬಿ ಸುರೇಶ್ ಗೌಡ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಎಫ್ಎಸ್ಟಿಅಧಿಕಾರಿ ಡಿ ಜಯರಾಮಣ್ಣ ದೂರು ನೀಡಿದ್ದಾರೆ. ಈ ದೂರಿನನ್ವಯ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.