ತುಮಕೂರು: ಕೋವಿಡ್-19 ಸಮಯದಲ್ಲಿ ರಾಜ್ಯದಲ್ಲಿ ಲಾಕ್ಡೌನ್ನಿಂದಾಗಿ ಸಾಮಾನ್ಯ ವರ್ಗದವರು ತೊಂದರೆಗೆ ಒಳಗಾದ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಪರಿಹಾರ ಹಾಗೂ ಆರ್ಥಿಕ ಪುನಶ್ಚೇತನಕ್ಕೆ ಪರ್ಯಾಯ ನೀತಿಗಳ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್, ತುಮಕೂರು ಜಿಲ್ಲಾ ಫುಟ್ಪಾತ್ ವ್ಯಾಪಾರಿಗಳ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಕಾರ್ಮಿಕರು ಪ್ರತಿಭಟನೆ ಧರಣಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೆಲಸದ ಅವಧಿ ಹೆಚ್ಚಳ, ವಾರದ ಕೆಲಸದ ಮಿತಿಯ ಹೆಚ್ಚಳ, ಕಾರ್ಖಾನೆ ಕಾಯ್ದೆ ಪರಿಭಾಷೆಗೆ ತಿದ್ದುಪಡಿ, ಕೈಗಾರಿಕಾ ವಿವಾದಗಳ ಕಾಯ್ದೆ ತಿದ್ದುಪಡಿ ಹಾಗೂ ಗುತ್ತಿಗೆ ಕಾರ್ಮಿಕರ ನೇಮಕಾತಿಗೆ ಪರವಾನಿಗಿ ಮಿತಿ 20 ರಿಂದ 50ಕ್ಕೆ ಹೆಚ್ಚಳ ತಿದ್ದುಪಡಿಗಳ ಸುಗ್ರೀವಾಜ್ಞೆ ಕೈಬಿಡಬೇಕು, ಲಾಕ್ಡೌನ್ ಅವಧಿಯ ವೇತನವನ್ನು ಕಾರ್ಮಿಕರಿಗೆ ಸಂಪೂರ್ಣವಾಗಿ ಪಾವತಿಸಬೇಕು.
ಇನ್ನು ಕಾರ್ಮಿಕ ಇಲಾಖೆಗಳಲ್ಲಿ ಇರುವ ಅರ್ಜಿಗಳನ್ನು ತ್ವರಿತವಾಗಿ ಸಂಧಾನ ಸಭೆ ನಡೆಸಿ ಇತ್ಯರ್ಥ ಮಾಡಿ ಕಾರ್ಮಿಕರಿಗೆ ಪರಿಹಾರ ದೊರಕಿಸಿಕೊಡಬೇಕು. ಆನ್ಲೈನ್ ಶಿಕ್ಷಣ ನೆಪದ ಲೂಟಿ ತಡೆಯಬೇಕು ಎಂಬ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.