ತುಮಕೂರು: ಕಟ್ಟಡ ಕಾರ್ಮಿಕರಿಗೆ ನೀಡಲಾಗುತ್ತಿರುವ ನೆರವು ಹೆಚ್ಚಿಸಲು ಮತ್ತು ಇತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ ನಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ಕಟ್ಟಡ ಮತ್ತು ಇತರ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ನೀಡಲಾಗುತ್ತಿರುವ ಕೋವಿಡ್-19 ಪರಿಹಾರ 5,000 ರೂ. ಎಲ್ಲ ಕಾರ್ಮಿಕರಿಗೂ ಸರಿಯಾಗಿ ತಲುಪಿಲ್ಲ. ಈ ಬಗ್ಗೆ ಪರಿಶೀಲಿಸಿ ಕೂಡಲೇ ಪಾವತಿಯಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಲಾಕ್ಡೌನ್ ಅವಧಿ ಹಾಗೂ ಕೊರೊನಾ ದಾಳಿ ರಾಜ್ಯದಲ್ಲಿ ಮುಂದುವರೆಯುತ್ತಿರುವುದರಿಂದ ಪ್ರತೀ ವಾರಕ್ಕೆ 2,000 ರೂ.ನಂತೆ ಮಾಸಿಕ 8,000 ರೂ. ಪರಿಹಾರ ಧನವನ್ನ ಮೂರು ತಿಂಗಳುಗಳ ಕಾಲ ಪ್ರತಿ ಕಾರ್ಮಿಕರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕು.
ಅಷ್ಟೇ ಅಲ್ಲದೇ, ಕಾರ್ಮಿಕ ಮಂಡಳಿಯಿಂದ ವಿತರಿಸಲಾದ ರೇಷನ್ ಕಿಟ್ಗಳನ್ನು ಶಾಸಕರಿಗೆ ನೀಡುವ ಕ್ರಮವನ್ನು ಕೂಡಲೇ ನಿಲ್ಲಿಸಬೇಕು ಮತ್ತು ಶಾಸಕರು ಈಗ ವಿತರಿಸಲಾದ ರೇಷನ್ ಕಿಟ್ಗಳನ್ನು ನೈಜ ಕಟ್ಟಡ ಕಾರ್ಮಿಕರಿಗೆ ವಿತರಿಸದೇ ತಮ್ಮ ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಕಂಡುಬಂದಿದೆ. ಇದು ಮಂಡಳಿಗೆ ಕೆಟ್ಟ ಹೆಸರನ್ನು ತರುವಂತಹ ಪ್ರಯತ್ನವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾರ್ಮಿಕ ಸಂಘಟನೆಗಳ ಮೂಲಕ ನೈಜ ಮತ್ತು ಅರ್ಹ ಫಲಾನುಭವಿಗಳಿಗೆ ರೇಷನ್ ವಿತರಣೆ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.