ಪಾವಗಡ: ತಿರುಮಣೆ ಪೊಲೀಸರು ಹಾಗೂ ಪೋರ್ಟ್ ಸೌರ ವಿದ್ಯುತ್ ಘಟಕದ ಅಧಿಕಾರಿಗಳು ರೈತರ ಮೇಲಿನ ದೌರ್ಜನ್ಯ ನಿಲ್ಲಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಪೂಜಾರಪ್ಪ ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು ವಳ್ಳೂರು ಗ್ರಾಮದ ರೈತ ಮುಖಂಡ ಚನ್ನಕೇಶವ ರೆಡ್ಡಿರವರಿಗೆ ಇದೇ ಗ್ರಾಮದ ಪಿ.ರಾಮಯ್ಯನ ಮತ್ತು ಮಕ್ಕಳು ಸರ್ವೆ ನಂಬರ್ 207ರ 15 ಎಕರೆ ಜಮೀನು ಮಾರಾಟ ಒಪ್ಪಂದವಾಗಿ ಅಗ್ರಿಮೆಂಟ್ ಬರೆಸಿ ನಂತರ ರಿಜಿಸ್ಟರ್ ಮಾಡಿಕೊಡದೇ ಸೌರ ವಿದ್ಯುತ್ ಘಟಕಕ್ಕೆ ಭೂಮಿಯನ್ನು ಗುತ್ತಿಗೆಗೆ ನೀಡಿದ್ದು, ಪ್ರಕರಣದ ಸಂಬಂಧ ಪಟ್ಟಣದ ಜೆಎಂಎಫ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಹಂತದಲ್ಲಿ ಸೌರ ವಿದ್ಯುತ್ ಘಟಕದ ಅಧಿಕಾರಿಗಳು ದೌರ್ಜನ್ಯದಿಂದ ಕಾಮಗಾರಿ ನಡೆಸುತ್ತಿದ್ದಾರೆ. ಹಾಗಾಗಿ ಕೂಡಲೇ ಕಾಮಗಾರಿಯನ್ನು ನಿಲ್ಲಿಸುವಂತೆ ಒತ್ತಾಯಿಸಿದರು.
ರೈತ ಚನ್ನಕೇಶವ ರೆಡ್ಡಿ ಮಾತನಾಡಿ ನಾನು ಖರೀದಿಸಿದ ಜಮೀನನ್ನು ನನ್ನಿಂದ ಮತ್ತೋಬ್ಬರಿಗೆ ಪಿ.ರಾಮಯ್ಯನ ಮಕ್ಕಳು ಮಾರಾಟ ಮಾಡಿಸಿ ನನಗೂ ಹಾಗೂ ನನ್ನಿಂದ ಜಮೀನನ್ನು ಖರೀದಿಸಿದ ವ್ಯಕ್ತಿಗು ರಿಜಿಸ್ಟರ್ ಮಾಡಿಕೊಡದೇ ವಂಚಿಸಿದ್ದು, ನ್ಯಾಯ ಕೇಳಲು ಹೋದರೆ ತಿರುಮಣೆ ಪಿಎಸ್ಐ ರಾಮಕೃಷ್ಣಪ್ಪ ನನ್ನ ವಿರುದ್ಧ ದೌರ್ಜನ್ಯ ಮಾಡುತ್ತಿದ್ದಾರೆ.
ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ತನಕ ಜಮೀನಿನಲ್ಲಿ ಯಾವುದೇ ಕಾಮಗಾರಿ ಮಾಡದಂತೆ ನಿಲ್ಲಿಸಬೇಕು. ಒಂದು ವೇಳೆ ಕಾಮಗಾರಿ ಮುಂದುವರೆದರೆ ರೈತ ಸಂಘದ ಸಹಭಾಗಿತ್ವದಲ್ಲಿ ತಹಶೀಲ್ದಾರ್ ಕಚೇರಿಯ ಮುಂದೆ ಮಂಗಳವಾರದಿಂದ ಧರಣಿ ಕೂರಲಾಗುವುದೆಂದು ಎಚ್ಚರಿಕೆ ನೀಡಿದರು.