ಕೋಲಾರ: ನಗರದ ಸಮಾನ ಮನಸ್ಕರ ತಂಡವೊಂದು ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಕೋಲಾರ ಆಂದೋಲನ ಸಮಿತಿ ರಚನೆ ಮಾಡಿಕೊಂಡು ಸದ್ದಿಲ್ಲದೇ ಪ್ಲಾಸ್ಟಿಕ್ ಅನ್ನು ಸಮರ್ಪಕವಾಗಿ ಮರುಬಳಕೆ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ.
ಪ್ರವಾಸಿ ತಾಣಗಳಲ್ಲಿ ಇರುವ ಪ್ಲಾಸ್ಟಿಕ್ ಕವರ್ ಸೇರಿ ಹಲವು ತ್ಯಾಜ್ಯಗಳನ್ನು ಸಂಗ್ರಹಿಸಿ ಅದನ್ನು ಪ್ಲಾಸ್ಟಿಕ್ ಬಾಟಲ್ಗಳಲ್ಲಿ ಬಿಗಿಯಾಗಿ ತುಂಬಿಸಿ ಇಟ್ಟಿಗೆ ರೂಪ ಕೊಡಲಾಗುತ್ತಿದೆ. ನಂತರ ವಿವಿಧ ಕಲಾಕೃತಿಗಳು, ಶೌಚಾಲಯಗಳು, ಮರಗಳಿಗೆ ತಡೆಗೋಡೆ, ಪಾರ್ಕ್ಗಳಲ್ಲಿ ಕೂರುವ ಬೆಂಚ್ಗಳಿಗೆ ಬಳಕೆ ಮಾಡಲು ಸಿದ್ಧತೆ ಮಾಡುತ್ತಿದ್ದಾರೆ.
ಹೀಗೆ ಯುವಕರ ಕೆಲಸದ ಬಗ್ಗೆ ತಿಳಿದು ಸ್ವತಃ ಕೋಲಾರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಭೇಟಿ ನೀಡಿ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಈವರೆಗೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಪ್ಲಾಸ್ಟಿಕ್ ಬ್ರಿಕ್ಸ್ಗಳ ತಯಾರು ಮಾಡಲಾಗಿದೆ. ಇಂತಹದೊಂದು ಕೆಲಸಕ್ಕೆ ಕೋಲಾರ ಜಿಲ್ಲೆಯಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಹಲವು ವಿದ್ಯಾರ್ಥಿ ಸಂಘಟನೆಗಳು, ಸಂಘ ಸಂಸ್ಥೆಗಳು ಕೈಜೋಡಿಸಿವೆ. ಈ ಮೂಲಕ ಪ್ಲಾಸ್ಟಿಕ್ ಕವರ್ಗಳು ಚರಂಡಿ ನೀರಿನ ಕಾಲುವೆಗಳಲ್ಲಿ ತುಂಬಿಕೊಂಡು ಸೃಷ್ಟಿಮಾಡುವ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗುತ್ತಿದೆ.