ತುಮಕೂರು: ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿರುವ ಹಿನ್ನೆಲೆ, ಐದು ತಾಲೂಕುಗಳಲ್ಲಿ ಕೊಳವೆ ಬಾವಿ ಕೊರೆಯಿಸಲು ಮುಂದಾಗುವವರು ಜಿಲ್ಲಾಡಳಿತದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂಬ ಆದೇಶ ಹೊರಡಿಸಲಾಗಿದೆ. ಇದು ರೈತ ಸಮುದಾಯದಲ್ಲಿ ಆತಂಕ ಸೃಷ್ಟಿಸಿದೆ.
ತುಮಕೂರು ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತವಾಗಿದೆ. 2 ರಿಂದ 4 ಸಾವಿರ ಅಡಿಗೆ ತಲುಪಿದರೂ ನೀರಿನ ಸೆಲೆ ಕಾಣಿಸುತ್ತಿಲ್ಲ. ಕೆಲ ತಾಲೂಕುಗಳಲ್ಲಿ ಬೇಕಾಬಿಟ್ಟಿ ಬೋರ್ ಕೊರೆಯಿಸಿರುವುದರಿಂದ ಅಂತರ್ಜಲ ಮಟ್ಟ ಕಡಿಮೆಯಾಗಿದೆ. ಹೀಗಾಗಿ ಜಿಲ್ಲೆಯ ಐದು ತಾಲೂಕುಗಳಲ್ಲಿ ಕೊಳವೆ ಬಾವಿ ಕೊರೆಸಲು ನಿರ್ಬಂಧ ಹಾಕಲಾಗಿದ್ದು, ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.
5 ತಾಲೂಕುಗಳಲ್ಲಿ ಷರತ್ತುಬದ್ಧ ಅನುಮತಿಯೊಂದಿಗೆ ಅವಕಾಶ:
ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಮಧುಗಿರಿ, ತಿಪಟೂರು, ತುಮಕೂರು ತಾಲೂಕುಗಳಲ್ಲಿ ಕೊಳವೆ ಬಾವಿ ಕೊರೆಯಿಸಲು ಇನ್ನು ಮುಂದೆ ಕಡ್ಡಾಯವಾಗಿ ಅನುಮತಿ ಪಡೆಯಬೇಕಾಗಿದೆ. ಷರತ್ತುಬದ್ಧ ಅನುಮತಿಯೊಂದಿಗೆ ಕನಿಷ್ಠ ಅವಕಾಶ ಕಲ್ಪಿಸಲಾಗುತ್ತದೆ.
ರಾಜ್ಯ ಅಂತರ್ಜಲ ಪ್ರಾಧಿಕಾರವು ಅತಿಯಾಗಿ ಅಂತರ್ಜಲ ಬಳಕೆ ಮಾಡುತ್ತಿರುವ 45 ತಾಲೂಕುಗಳನ್ನು ರಾಜ್ಯದಲ್ಲಿ ಗುರುತಿಸಿದ್ದು, ಅದ್ರಲ್ಲಿ ತುಮಕೂರು ಜಿಲ್ಲೆಯ ಐದು ತಾಲೂಕುಗಳು ಸೇರಿವೆ. ಈ ಪ್ರದೇಶಗಳಲ್ಲಿ ಯಾವುದೇ ಉದ್ದೇಶಕ್ಕಾಗಿ ಕೊಳವೆ ಬಾವಿ ಕೊರೆಸಬೇಕಾದರೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಜಿಲ್ಲಾಡಳಿತದ ಕ್ರಮ:
ಸರ್ಕಾರಿ, ನಿಗಮ, ಮಂಡಳಿ, ಇತರ ಇಲಾಖೆ ಹಾಗೂ ಖಾಸಗಿಯವರು ಕುಡಿಯುವ ನೀರು, ವಾಣಿಜ್ಯ ಉದ್ದೇಶಕ್ಕೆ ಕೊಳವೆ ಬಾವಿ ತೆಗೆಯಿಸುವುದನ್ನು ನಿರ್ಬಂಧಿಸಲಾಗಿದೆ. ಅನುಮತಿ ಪಡೆಯದೇ ಕೊರೆಸಿದರೆ ಕಾನೂನು ಕ್ರಮ ಜರುಗಿಸಲಾಗುತ್ತಿದೆ.
ಕೊಳವೆ ಬಾವಿ ಕೊರೆಯುವ ಯಂತ್ರ, ಏಜೆನ್ಸಿಗಳು ರಾಜ್ಯ ಅಂತರ್ಜಲ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ನೋಂದಣಿ ಇಲ್ಲದೇ ಅಕ್ರಮವಾಗಿ ಕೊಳವೆ ಬಾವಿ ಕೊರೆಯುವಲ್ಲಿ ತೊಡಗಿಸಿಕೊಂಡರೆ ಅಂತಹ ಯಂತ್ರಗಳನ್ನು ವಶಪಡಿಸಿಕೊಂಡು ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.
ರೈತರ ಮನವಿ:
ಆದರೆ ಸರ್ಕಾರ ಬೋರ್ವೆಲ್ ಕೊರೆಸಲು ತಂದಿರುವ ಹೊಸ ನೀತಿ ಸರಳೀಕರಣ ಮಾಡಬೇಕು. ರೈತರಿಗೆ ತೊಂದರೆಯಾಗದಂತೆ ಬೇಗನೇ ಅನುಮತಿ ಸಿಗುವಂತಾಗಬೇಕು ಎನ್ನುತಾರೆ ರೈತರು.
ಜಲ ತಜ್ಞರು ಏನಂತಾರೆ?
ಜಲ ತಜ್ಞರ ಪ್ರಕಾರ, ಇನ್ನು ಕೆಲವೇ ಕೆಲವು ವರ್ಷದಲ್ಲಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಸಂಪೂರ್ಣ ಕುಸಿಯಲಿದೆ. ಈಗಲೇ ಎಚ್ಚೆತ್ತುಕೊಳ್ಳದೇ ಇದ್ದರೆ ಮುಂದೆ ದೊಡ್ಡ ಗಂಡಾಂತರ ಎದುರಿಸಬೇಕಾಗಲಿದೆ ಎಂಬ ಮಾಹಿತಿ ನೀಡಿದ್ದಾರೆ. ನೀರಿನ ಮಿತ ಬಳಕೆ, ಅರಣ್ಯ ಸಂರಕ್ಷಣೆಯಿಂದ ಮಾತ್ರ ಜಲಮೂಲ ವೃದ್ಧಿ ಮಾಡಬಹುದಾಗಿದೆ.