ತುಮಕೂರು: ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ದೃಷ್ಟಿಯಿಂದ ಆರಂಭವಾದ ಲಾಕ್ಡೌನ್ ನಂತರದಲ್ಲಿ ಅನೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ನು ಇಂತಹ ಉದ್ಯೋಗಿಗಳು ಆರ್ಥಿಕ ಸಂಕಷ್ಟದಿಂದ ಪಾರಾಗಲು ತಮ್ಮ ಪಿಎಫ್ ಖಾತೆಯಿಂದ ಹಣವನ್ನು ಮರಳಿ ಪಡೆದುಕೊಂಡಿದ್ದಾರೆ.
ಈ ಮೂಲಕ ಜೀವನ ನಿರ್ವಹಣೆಗೆ ಈ ಹಣವನ್ನು ಬಳಕೆ ಮಾಡಿಕೊಂಡಿದ್ದಾರೆ. ಕೊರೊನಾ ಬಿಕ್ಕಟ್ಟಿನ ನಾಲ್ಕು ತಿಂಗಳ ಅವಧಿಯಲ್ಲಿ ತುಮಕೂರು ವಿಭಾಗದ ಭವಿಷ್ಯನಿಧಿ ಕಚೇರಿಯಿಂದ 43,00,55,446 ರೂ. ಗಳನ್ನು ಭವಿಷ್ಯನಿಧಿ ಖಾತೆದಾರರಿಗೆ ಹಣವನ್ನು ಬಿಡುಗಡೆ ಮಾಡಲಾಗಿರುವುದು ಗಮನಾರ್ಹ ಅಂಶವಾಗಿದೆ. ಹೀಗೆ ಬಿಡುಗಡೆಗೊಂಡಿರುವ ಹಣವನ್ನು ಪಡೆಯಲು 10,058 ಮಂದಿ ಭವಿಷ್ಯನಿಧಿ ಖಾತೆದಾರರಲ್ಲಿ ಕೆಲವರು ಖಾತೆಯಲ್ಲಿನ ಸಂಪೂರ್ಣ ಹಣವನ್ನು ತೆಗೆದುಕೊಂಡಿದ್ದರೆ ಇನ್ನು ಕೆಲವರು ಅಡ್ವಾನ್ಸ್ ರೂಪದಲ್ಲಿ ತೆಗೆದುಕೊಂಡಿದ್ದಾರೆ. ಇನ್ನು ಕೆಲವರು ಮದುವೆ ಕಾರ್ಯಕ್ರಮಕ್ಕೆ ಪಡೆದುಕೊಂಡಿದ್ದಾರೆ.
ಏಪ್ರಿಲ್, ಮೇ, ಜೂನ್, ಜುಲೈ, ಆಗಸ್ಟ್ ತಿಂಗಳ ಅವಧಿಯಲ್ಲಿ ಕೇವಲ ಮೂವತ್ತೆರಡು ಹೊಸ ಘಟಕಗಳು ಆರಂಭವಾಗಿರುವುದು ಅಲ್ಲದೆ ತುಮಕೂರು ವಿಭಾಗದ ಭವಿಷ್ಯನಿಧಿ ಕೇಂದ್ರದಲ್ಲಿ ನೋಂದಣಿಯಾಗಿವೆ. ಪ್ರಸ್ತುತ ತುಮಕೂರು ವಿಭಾಗದಲ್ಲಿ 1495 ಘಟಕಗಳು ನೋಂದಣಿಯಾಗಿದ್ದು, 15.05 ಲಕ್ಷ ಪಿಎಫ್ ಖಾತೆಗಳಿವೆ. ಅದ್ರಲ್ಲಿ 2,14,798 ಪಿಎಫ್ ಖಾತೆದಾರರು ಚಾಲ್ತಿಯಲ್ಲಿದ್ದಾರೆ.
ಇನ್ನು ಪೀಣ್ಯ ಮತ್ತು ತುಮಕೂರು ವಿಭಾಗದಲ್ಲಿ ಏಪ್ರಿಲ್ ತಿಂಗಳಿನಿಂದ ಆಗಸ್ಟ್ ತಿಂಗಳವರೆಗೆ 2,14,951 ಖಾತೆದಾರರು ಸೇರ್ಪಡೆಗೊಂಡಿದ್ದಾರೆ.
ಒಟ್ಟಾರೆ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಏಪ್ರಿಲ್ ತಿಂಗಳಿನಿಂದ ಆಗಸ್ಟ್ ತಿಂಗಳವರೆಗೆ ಕೇವಲ 32 ಹೊಸ ಘಟಕಗಳು ತುಮಕೂರು ಭವಿಷ್ಯನಿಧಿ ಕೇಂದ್ರದ ವ್ಯಾಪ್ತಿಯಲ್ಲಿ ನೋಂದಣಿಯಾಗಿವೆ. ಅಲ್ಲದೆ ಉದ್ಯೋಗ ಸೃಷ್ಟಿ ಕೂಡ ಅತಿ ಕನಿಷ್ಠ ಮಟ್ಟದಲ್ಲಿ ಇರುವುದನ್ನು ಇಲ್ಲಿ ಕಾಣಬಹುದಾಗಿದೆ.