ತುಮಕೂರು: ನಗರದ ಎರಡನೇ ವಾರ್ಡ್ಗೆ ಸೇರಿದ ಅಂತರಸನಹಳ್ಳಿ ನಿವಾಸಿಗಳು ಖಾಲಿ ಬಿಂದಿಗೆಗಳನ್ನು ಹಿಡಿದು ಮಹಾನಗರ ಪಾಲಿಕೆಯ ಮುಂದೆ ಘೊಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ 2ನೇ ವಾರ್ಡ್ ನಾಗರಿಕರು, ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕೆಂದು ಮಹಾನಗರ ಪಾಲಿಕೆಯ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ವಾಲ್ ಮ್ಯಾನ್ಗಳನ್ನು ಪ್ರಶ್ನಿಸಿದರೆ ನೀರು ಇಲ್ಲ. ಹಾಗಾಗಿ ನೀರು ಬಿಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾರೆ. ಹೀಗಾದರೆ ನಮ್ಮ ಸಮಸ್ಯೆಯನ್ನು ಕೇಳುವರು ಯಾರು? ಇದರ ಜೊತೆಗೆ ಮೂಲಭೂತ ಸೌಕರ್ಯಗಳಿಂದ 2ನೇ ವಾರ್ಡ್ ವಂಚಿತವಾಗಿದೆ. ಶೀಘ್ರವಾಗಿ ನಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇನ್ನು ತುರ್ತಾಗಿ ಇಂದಿನಿಂದಲೇ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುವುದು. ಎಂಜಿನಿಯರ್ ಸ್ಥಳ ಪರಿಶೀಲನೆ ನಡೆಸಿ ಬೋರ್ವೆಲ್ ಕೊರೆಸಲು ಅಥವಾ ರೀ ಬೋರ್ ಮಾಡಲು ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಒಂದೊಂದಾಗಿ ನಿಮ್ಮ ಎಲ್ಲಾ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಮಹಾನಗರ ಪಾಲಿಕೆಯ ಉಪ ಆಯುಕ್ತ ಯೋಗಾನಂದ್ ಭರವಸೆ ನೀಡಿದರು.