ತುಮಕೂರು: ಪಾವಗಡ ಖಾಸಗಿ ಬಸ್ ದುರಂತದ ನಂತರ ಸರ್ಕಾರವೇ ಪಾವಗಡ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೂ ಸರ್ಕಾರಿ ಬಸ್ ಸೌಕರ್ಯ ಕಲ್ಪಿಸಿ ಕೊಡುವುದಾಗಿ ಭರವಸೆ ನೀಡಿತ್ತು. ಆದರೆ, ಘಟನೆ ನಡೆದು ಎರಡ್ಮೂರು ದಿನಗಳು ಕಳೆದರೂ ಈ ವ್ಯವಸ್ಥೆ ಇನ್ನೂ ಕೂಡ ಅನುಷ್ಠಾನಕ್ಕೆ ಬಾರದಿರುವುದು ತಾಲೂಕಿನ ವ್ಯಾಪ್ತಿಯಲ್ಲಿ ಸ್ಪಷ್ಟವಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪಾವಗಡ ತಾಲೂಕಿನ ಗುಂಡ್ಲಹಳ್ಳಿ ಗ್ರಾಮದಲ್ಲಿ ಬಸ್ ಇಲ್ಲದೆ ಜನರು ಪರದಾಡುತ್ತಿದ್ದು, ಬಸ್ ವ್ಯವಸ್ಥೆಯಿಲ್ಲದೆ ಟಾಟಾ ಏಸ್ ವಾಹನವನ್ನೇ ಆಶ್ರಯಿಸಿದ್ದಾರೆ.
ಪ್ರತಿದಿನ ಶಾಲಾ ವಿದ್ಯಾರ್ಥಿಗಳು, ಪ್ರಯಾಣಿಕರು ಗ್ರಾಮೀಣ ಪ್ರದೇಶಗಳಿಂದ ಪಾವಗಡ ಪಟ್ಟಣಕ್ಕೆ ಬರಲು ಪರದಾಡುವಂತಾಗಿದೆ. ಅಪ್ಪಿ ತಪ್ಪಿ ಏನಾದರೂ ಅನಾಹುತ ನಡೆದರೆ ಹೆಚ್ಚಿನ ಮಂದಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತ ಪರಿಸ್ಥಿತಿ ಕಂಡುಬರುತ್ತಿದೆ. ನಮಗೆ ಬಸ್ ವ್ಯವಸ್ಥೆ ಇಲ್ಲ. ಹೀಗಾಗಿ, ಅನಿವಾರ್ಯವಾಗಿ ಟಾಟಾ ಏಸ್ನಲ್ಲಿ ಬರುವಂತಾಗಿದೆ ಎಂದು ತಮ್ಮ ಅಳಲನ್ನು ಪ್ರಯಾಣಿಕರು ತೋಡಿಕೊಳ್ಳುತ್ತಾರೆ.
ಇತ್ತೀಚೆಗಷ್ಟೇ ನಡೆದ ಅಪಘಾತದ ಭಾಗವಾದಂತಹ ವೈ.ಎನ್. ಹೊಸಕೋಟೆ ಪ್ರದೇಶದಿಂದ ಪ್ರತಿನಿತ್ಯ ವಿವಿಧ ಗ್ರಾಮೀಣ ಪ್ರದೇಶದಿಂದ ಸುಮಾರು 80ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಪಾವಗಡಕ್ಕೆ ಬರುತ್ತಾರೆ. ಘಟನೆ ನಡೆದ ನಂತರ ಅನಿವಾರ್ಯವಾಗಿ ಅವರೆಲ್ಲರೂ ಈಗಲೂ ಸಹ ಅಪಾಯಕಾರಿ ಪ್ರಯಾಣದೊಂದಿಗೆ ನಗರಕ್ಕೆ ಬರುತ್ತಿರುವುದು ಮತ್ತೊಂದು ದುರಂತಕ್ಕೆ ಆಹ್ವಾನ ನೀಡಿದಂತಿದೆ. ಭರವಸೆ ನೀಡಿರುವ ಸರ್ಕಾರ ಇನ್ನಾದರೂ ಅಪಾಯಗಳು ಸಂಭವಿಸದಂತೆ ತಡೆಯಲು ಈ ಊರಿಗೆ ಸೂಕ್ತ ಸಾರಿಗೆ ಸೌಲಭ್ಯ ಕಲ್ಪಿಸಬೇಕಿದೆ.
ಓದಿ: ಮೇಕೆದಾಟು: ಕಾಲಹರಣ ಮಾಡದೇ ಅರಣ್ಯ, ಪರಿಸರ ಇಲಾಖೆ ಒಪ್ಪಿಸಿ- ಜೆಡಿಎಸ್