ತುಮಕೂರು: ಜಿಲ್ಲೆ ಬಹುತೇಕ ಬಯಲುಸೀಮೆ ಪ್ರದೇಶವಾಗಿದ್ದು, ಹೆಚ್ಚಿನ ರೈತರು ತಮ್ಮ ಜಮೀನಿನಲ್ಲಿ ಶೇಂಗಾ ಬೆಳೆ ಬೆಳೆದಿದ್ದಾರೆ. ಆದರೆ ಈ ಬಾರಿ ಉತ್ತಮ ಫಸಲು ಬಾರದೆ ರೈತರು ಕಂಗಾಲಾಗಿದ್ದಾರೆ.
ಈ ಸಲ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಜಮೀನಿನಲ್ಲಿ ಶೇಂಗಾ ಬೆಳೆ ಬಿತ್ತನೆ ಮಾಡಲಾಗಿತ್ತು. ಪ್ರಾರಂಭದಲ್ಲಿ ಉತ್ತಮ ಪ್ರಮಾಣದಲ್ಲಿ ಮಳೆಯಾಗಿ ಹೆಚ್ಚಿನ ಇಳುವರಿ ಬರುವ ನಿರೀಕ್ಷೆಯಲ್ಲಿ ರೈತರಿದ್ದರು. ಆದರೆ ಇಳುವರಿ ಪ್ರಮಾಣ ಕುಸಿದಿದ್ದು, ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಒಂದು ಎಕರೆಗೆ ಕನಿಷ್ಟ 4ರಿಂದ 5 ಕ್ವಿಂಟಾಲ್ ಶೇಂಗಾ ಇಳುವರಿ ದೊರೆಯುವ ನಿರೀಕ್ಷೆಯಲ್ಲಿ ರೈತರಿದ್ದರು. ಆದರೆ ಅಕಾಲಿಕವಾಗಿ ಮಳೆಯಾದ ಪರಿಣಾಮ ಶೇಂಗಾ ಇಳುವರಿ ಕುಸಿದಿದೆ. ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಶೇಂಗಾಕ್ಕೆ ಸರಾಸರಿ 4,590 ರೂ ಇದ್ದು, ಸರಾಸರಿ ಬೆಲೆಯೂ ಸಹ ರೈತರಿಗೆ ದಕ್ಕುತ್ತಿಲ್ಲ.ರಾಜ್ಯ ಸರ್ಕಾರ ನಾಫೆಡ್ ಮೂಲಕ ಜಿಲ್ಲೆಯಲ್ಲಿ ಶೇಂಗಾ ಖರೀದಿಗೆ ಮುಂದಾಗಿದ್ದು, ಕ್ವಿಂಟಾಲ್ಗೆ 5,275 ನಿಗದಿಪಡಿಸಲಾಗಿದೆ.
ಓದಿ : ಓಮ್ನಿ ಕಾರು, ಪಿಕಪ್ ವಾಹನ ನಡುವೆ ಡಿಕ್ಕಿ : ಇಬ್ಬರು ಸಾವು
ಇನ್ನೊಂದೆಡೆ, ನಾಫೆಡ್ನಲ್ಲಿ ರೈತರು ಮಾರಾಟ ಮಾಡುವ ಶೇಂಗಾದಲ್ಲಿ ಕೆಲ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ. ಅದರಲ್ಲಿ 100 ಗ್ರಾಂ. ಶೇಂಗಾದಲ್ಲಿ ಕನಿಷ್ಟ 75 ಗ್ರಾಂ ಕಾಳು ಇರಬೇಕು. ಶೇಕಡಾ 4ರಷ್ಟು ತ್ಯಾಜ್ಯ ಮತ್ತು ಶೇ.4 ರಷ್ಟು ಕಾಳುಗಳು ಇರಬೇಕು. ಹೀಗಿದ್ದರೆ ಮಾತ್ರ ನಾಫೆಡ್ ಖರೀದಿಸಲಿದೆ ಎಂದು ಕರ್ನಾಟಕ ಎಣ್ಣೆ ಬೀಜ ನಿಗಮದ ಜಿಲ್ಲಾ ಮಟ್ಟದ ಅಧಿಕಾರಿ ಶಿವಲಿಂಗಯ್ಯ ತಿಳಿಸಿದ್ದಾರೆ.