ತುಮಕೂರು: ಸ್ಪರ್ಧೆಗಳಲ್ಲಿ ಸೋಲು, ಗೆಲುವು ಎಂಬುದು ಸಾಮಾನ್ಯ, ಆದರೆ ಸ್ಪರ್ಧೆಯಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಪ್ರಮುಖ ಎಂದು ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಡೆಪ್ಯೂಟಿ ಡೈರೆಕ್ಟರ್ ಜನರಲ್ ಏರ್ ಕಮಾಂಡರ್ ಲಲಿತ್ ಕುಮಾರ್ ಜೈನ್ ಹೇಳಿದ್ದಾರೆ.
ತುಮಕೂರು ವಿಶ್ವವಿದ್ಯಾನಿಲಯದ ಸರ್.ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಎನ್ಸಿಸಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ವತಿಯಿಂದ ಆಯೋಜಿಸಲಾಗಿದ್ದ ಅಂತರ್ ಗ್ರೂಪ್ ಬಾಲಕಿಯ ಥಲ್ ಸೈನಿಕ್ ಶಿಬಿರದ ಬಹುಮಾನ ವಿತರಣಾ ಸಮಾರಂಭದಲ್ಲಿ ಈ ರೀತಿ ಹೇಳಿದ್ದಾರೆ.
ಯಾವುದೇ ಸ್ಪರ್ಧೆ ಇರಲಿ ಗೆಲುವು-ಸೋಲು ಇದ್ದೇ ಇರುತ್ತದೆ. ಆ ಸ್ಪರ್ಧೆಯಲ್ಲಿ ಭಾಗವಹಿಸುವುದು ಬಹಳ ಮುಖ್ಯ. ಸ್ಪರ್ಧೆಯಲ್ಲಿ ಸಿಗುವ ಅನುಭವ ಮತ್ತು ತಿಳುವಳಿಕೆ ಜೀವನದ ಹಾದಿಯನ್ನು ಬದಲಾಯಿಸುತ್ತದೆ. ಎನ್ಸಿಸಿ ಸೇರುವ ಅಭ್ಯರ್ಥಿಗಳಿಗೆ ದೇಶ ಸೇವೆ, ಸಮಾಜ ಸೇವೆ, ರಕ್ಷಣೆ ಸೇರಿದಂತೆ ಮುಂತಾದವುಗಳ ಬಗ್ಗೆ ತರಬೇತಿ ನೀಡುವುದರ ಜೊತೆಗೆ ಆತ್ಮಸ್ಥೈರ್ಯ ತುಂಬಲಾಗುವುದು ಎಂದರು.
ಬಳಿಕ ಮಾತನಾಡಿದ ಶಾಸಕ ಜಿ.ಬಿ. ಜ್ಯೋತಿಗಣೇಶ್, ಎನ್ಸಿಸಿ ವಿದ್ಯಾರ್ಥಿಗಳು ದೇಶ ಸೇವೆ ಮಾಡಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡಾಗ ಮಾತ್ರ ಇದು ಸಾರ್ಥಕವಾಗುತ್ತದೆ. ಇಂದು ಮಹಿಳೆಯರು ಕೂಡ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.