ತುಮಕೂರು: ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಕ್ಷೇತ್ರದ ಶಾಸಕರಾದ ಡಾ ಜಿ ಪರಮೇಶ್ವರ್ ಎಲ್ಲಾ ಸಭೆಗೈ ಹಾಜರಾಗುತ್ತಿದ್ದರು. ಆದರೆ ಈಗ ಬಿಜೆಪಿ ಸರ್ಕಾರದಿಂದ ಜಿಲ್ಲಾ ಉಸ್ತುವಾರಿ ಸಚಿವ ಜೆ. ಸಿ. ಮಧುಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯುವ ಕೆಡಿಪಿ ಸಭೆಗೆ ಪರಮೇಶ್ವರ್ ಒಮ್ಮೆಯೂ ಹಾಜರಾಗಿರದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇಂದು ನಡೆದ 2019-20ನೇ ಸಾಲಿನ ಮೂರನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಏರ್ಪಡಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಜೆ ಸಿ ಮಧುಸ್ವಾಮಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಇದೇ ವೇಳೆ ನಗರದಲ್ಲಿರುವ ಖಾಸಗಿ ಕಾರ್ಯಕ್ರಮದಲ್ಲಿ ಪರಮೇಶ್ವರ್ ಭಾಗವಹಿಸಿದ್ದರೂ ಕೂಡ ಸಭೆಗೆ ಬರಲಿಲ್ಲ.
ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ಆಯೋಜನೆಗೊಳ್ಳುತ್ತಿತ್ತು. ಚಿಕ್ಕನಾಯಕನಹಳ್ಳಿ ಶಾಸಕ ಮಾಧುಸ್ವಾಮಿ ಅವರೊಂದಿಗೆ ಸಭೆಯಲ್ಲಿ ಸಾಕಷ್ಟು ವಾಗ್ವಾದಗಳು ಪದೇಪದೆ ನಡೆಯುತ್ತಿದ್ದವು. ಆದರೆ, ಈಗ ಬದಲಾದ ಪರಿಸ್ಥಿತಿಯಲ್ಲಿ ಮಾಧುಸ್ವಾಮಿ ಉಸ್ತುವಾರಿ ಸಚಿವರಾಗಿ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸುತ್ತಿದ್ದಾರೆ.
ಇದೀಗ ಡಾ. ಜಿ ಪರಮೇಶ್ವರ್ ಕೆಡಿಪಿ ಸಭೆಗೆ ಆಗಮಿಸಿದರೂ ಕೇವಲ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಹಾಜರಾಗಬೇಕಾಗಬೇಕಿದೆ. ಆದ್ದರಿಂದಲೇ ಪರಮೇಶ್ವರ್ ತೀವ್ರ ಇರುಸುಮುರುಸಿಗೆ ಒಳಗಾಗುವಂತಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದಾಗಿನಿಂದಲೂ ಕೆಡಿಪಿ ಸಭೆಗೆ ಗೈರಾಗುತ್ತಿದ್ದಾರೆ ಎಂಬ ಮಾತುಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇನ್ನೊಂದೆಡೆ ಕೆಡಿಪಿ ಸಭೆ ಆಯೋಜನೆ ಆಗಿರುವ ಕುರಿತಂತೆ ನನಗೆ ಮಾಹಿತಿ ಇಲ್ಲ ಎಂಬ ಮಾತನ್ನು ಪರಮೇಶ್ವರ್ ಒಂದೆಡೆ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವ ಜೆ ಸಿ ಮಧುಸ್ವಾಮಿ ಅವರ ಪ್ರಕಾರ, ಕೆಡಿಪಿ ಸಭೆಗೆ ಬರುವಂತೆ ಆಹ್ವಾನಿಸಿದ್ದೇವೆ. ಬರುವುದು ಬಿಡುವುದು ಅವರ ವಿವೇಚನೆಗೆ ಬಿಟ್ಟಿದ್ದು. ಅದು ಅವರ ವೈಯಕ್ತಿಕ ವಿಚಾರವಾಗಿದೆ ಎಂದಿದ್ದಾರೆ.