ತುಮಕೂರು: ಪಾಗಲ್ ಪ್ರೇಮಿವೋರ್ವ ಕ್ಷುಲ್ಲಕ ಕಾರಣಕ್ಕೆ ಪ್ರೀತಿಸಿದ ಯುವತಿಯನ್ನೇ ಕೊಲೆ ಮಾಡಲು ಯತ್ನಿಸಿರುವ ಘಟನೆ ಶಿರಾ ತಾಲೂಕಿನ ಮದಲೂರು ಗ್ರಾಮದಲ್ಲಿ ನಡೆದಿದೆ.
ಅದೃಷ್ಟವಶಾತ್ ಯುವತಿ ಸಾವಿನ ದವಡೆಯಿಂದ ಪಾರಾಗಿದ್ದಾಳೆ. ಗುರು ಎಂಬಾತನಿಂದ ಈ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ. ಯುವತಿಯ ವೇಲ್ ನಿಂದಲೇ ಆಕೆಯ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಲು ಯತ್ನಿಸಿದ್ದ ಎನ್ನಲಾಗ್ತಿದೆ.
ಚಿತ್ರದುರ್ಗದಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಯುವತಿ ಸ್ಥಳೀಯ ಯುವಕನನ್ನು ಪ್ರೀತಿಸುತ್ತಿದ್ದಳು. ಆಕೆಯೊಂದಿಗೆ ಜೊತೆ ಮಾತನಾಡಬೇಕು ಎಂದು ಮದಲೂರು ಬಳಿ ಇರುವ ಲಿಂಗದಹಳ್ಳಿ ಗೇಟ್ ಸಮೀಪ ಕರೆದೊಯ್ದು ತನ್ನನ್ನು ಕೊಲ್ಲಲು ಮುಂದಾಗಿದ್ದ ಎಂದು ಯುವತಿ ಆರೋಪಿಸಿದ್ದಾಳೆ.
ಯುವಕನ ಹತ್ಯೆ ಯತ್ನದಿಂದ ಯುವತಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿದ್ದಳು. ಯುವತಿ ಸಾವನ್ನಪ್ಪಿದ್ದಾಳೆಂದು ಗುರು ಅಲ್ಲಿಂದ ಓಡಿಹೋಗಿದ್ದಾನೆ. ಕೆಲ ಸಮಯದ ಬಳಿಕ ಎಚ್ಚರಗೊಂಡಿದ್ದ ಯುವತಿ ತನ್ನ ಬಳಿಯಿದ್ದ ಮೊಬೈಲ್ನಿಂದ ತಾಯಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಳು.
ಹತ್ಯೆ ಯತ್ನ ನಡೆದ ಸ್ಥಳಕ್ಕೆ ಬಂದ ಪೋಷಕರು ಯುವತಿಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಶಿರಾ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.