ತುಮಕೂರು: ಕಾಣೆಯಾಗಿದ್ದ 'ರುಸ್ತುಮಾ' ಹೆಸರಿನ ಗಿಳಿ ತುಮಕೂರಿನ ಬಂಡೆಪಾಳ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಗಿಳಿ ಹುಡುಕಿಕೊಟ್ಟವರಿಗೆ ಮಾಲೀಕ ಅರ್ಜುನ್ ಅವರು 85 ಸಾವಿರ ರೂಪಾಯಿ ಬಹುಮಾನ ಕೊಟ್ಟು ಮನೆಗೆ ತೆಗೆದುಕೊಂಡು ಹೋಗಿದ್ದರು. ಇದೀಗ ಎರಡು ಗಿಳಿಗಳನ್ನು ಗುಜರಾತಿನ ಸರ್ದಾರ್ ವಲ್ಲಭಾಯಿ ಪಟೇಲ್ ಜೂವಾಲಾಜಿಕಲ್ ಪಾರ್ಕ್ಗೆ ದೇಣಿಗೆಯಾಗಿ ನೀಡಿದ್ದಾರೆ.
ಜುಲೈ 16 ರಂದು ತುಮಕೂರಿನ ಜಯನಗರದ ನಿವಾಸಿ ಅರ್ಜುನ್ ಎಂಬುವರ ಆಫ್ರಿಕನ್ ಗ್ರೇ ತಳಿಯ ಗಿಳಿ ಕಾಣೆಯಾಗಿತ್ತು. ತಮ್ಮ ಮುದ್ದಿನ ಗಿಳಿ ಹುಡುಕಿಕೊಟ್ಟವರಿಗೆ 50,000 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಅಲ್ಲದೇ, ತಾವೂ ಸಹ ಗಿಳಿಗಾಗಿ ಹುಡುಕಾಟ ನಡೆಸಿದ್ದರು.
ಅರ್ಜುನ್ ಮೊಬೈಲ್ ನಂಬರ್ಗೆ ಕರೆ: ತುಮಕೂರಿನ ಬಂಡೆಪಾಳ್ಯ ಗ್ರಾಮದ ಶ್ರೀನಿವಾಸ್ ಎಂಬುವರು ತಮ್ಮ ಮನೆ ಮುಂದೆ ಕುಳಿತ್ತಿದ್ದ ಈ ಅಪರೂಪದ ಗಿಳಿಯನ್ನು ಸಂರಕ್ಷಿಸಿಟ್ಟಿದ್ದರು. ಬಳಿಕ ಗಿಳಿ ಕಾಣೆಯಾದ ಸುದ್ದಿ ಬಗ್ಗೆ ಅವರಿಗೆ ಮಾಹಿತಿ ಸಿಕ್ಕಿದೆ. ಗಿಳಿಯ ಮಾಲೀಕ ಈ ಬಗ್ಗೆ ಪ್ರಚಾರ ಮಾಡಿದ್ದಲ್ಲದೆ, ಮಾಧ್ಯಮಗಳಲ್ಲಿಯೂ ಸುದ್ದಿ ಬಿತ್ತರವಾಗಿದ್ದರ ಕುರಿತು ಅಕ್ಕಪಕ್ಕದ ಮನೆಯವರು ಶ್ರೀನಿವಾಸ್ಗೆ ತಿಳಿಸಿದ್ದಾರೆ. ನಂತರ ಅವರು ಅರ್ಜುನ್ ಮೊಬೈಲ್ ನಂಬರ್ಗೆ ಕರೆ ಮಾಡಿ ಸಂಪರ್ಕಿಸಿ ಗಿಣಿಯನ್ನು ವಾಪಸ್ ಕೊಟ್ಟಿದ್ದಾರೆ.
ಪಾರ್ಕ್ಗೆ ಹಿಂತಿರುಗಿಸಿದ ಮಾಲೀಕ: ಪ್ರೀತಿಯಿಂದ ಸಾಕಿದ ಗಿಳಿ ಮರಳಿ ಗೂಡು ಸೇರುತ್ತಿದ್ದಂತೆ ಮಾಲೀಕ ಅರ್ಜುನ್ 85,000 ರೂಪಾಯಿ ಬಹುಮಾನ ನೀಡಿದ್ದರು. ಮೊದಲು 50 ಸಾವಿರ ರೂಪಾಯಿ ನೀಡಲಾಗುವುದು ಎಂದು ತಿಳಿಸಲಾಗಿದ್ದರೂ ಸಂತಸದಿಂದ ಮೊತ್ತವನ್ನು ಹೆಚ್ಚಿಸಿದ್ದರು. ರುಸ್ತುಮಾ ಮರಳಿ ಗೂಡು ಸೇರಿರುವುದಕ್ಕೆ ಮನೆಯಲ್ಲಿ ಸಂಭ್ರಮ ಮನೆಮಾಡಿತ್ತು. ಇದೀಗ ಅರ್ಜುನ ಅವರು ತಮ್ಮ ಖಾಸಗಿ ವಾಹನದಲ್ಲಿ ಗುಜರಾತಿನ ಕೆವಾಡಿಯಾದಲ್ಲಿರುವ ಪಾರ್ಕ್ಗೆ ಅದನ್ನು ಬಿಟ್ಟು ಬಂದಿದ್ದಾರೆ.
ಇದನ್ನೂ ಓದಿ: ನಾಪತ್ತೆಯಾಗಿದ್ದ ಗಿಳಿ ಪತ್ತೆ.. ರುಸ್ತುಮಾ ಹುಡುಕಿಕೊಟ್ಟವರಿಗೆ ಸಿಕ್ತು 85 ಸಾವಿರ ರೂ. ಬಹುಮಾನ