ತುಮಕೂರು: ಗ್ರಾಮದಲ್ಲಿ ಎಂಎಸ್ಐಎಲ್ ಮದ್ಯದ ಅಂಗಡಿ ಬೇಡ. ಬದಲಾಗಿ ಪ್ರಾಥಮಿಕ ಚಿಕಿತ್ಸಾ ಕೇಂದ್ರವೋ ಅಥವಾ ಪಡಿತರ ಅಂಗಡಿ ತೆರೆಯಿರಿ ಎಂದು ಎಂಎಸ್ಐಎಲ್ ಅಧಿಕಾರಿಗಳನ್ನು ತುಮಕೂರು ತಾಲೂಕಿನ ಬಡ್ಡರಹಳ್ಳಿ ಗ್ರಾಮದ ಮಹಿಳೆಯರು ತರಾಟೆಗೆ ತೆಗೆದುಕೊಂಡರು.
ಎಂಎಸ್ಐಎಲ್ ಮದ್ಯದಂಗಡಿ ತೆರೆಯಲು ಅಧಿಕಾರಿಗಳು ಮಾಲು ಸಮೇತ ವಡ್ಡರಹಳ್ಳಿ ಗ್ರಾಮಕ್ಕೆ ಬಂದಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಗ್ರಾಮದ ಮಹಿಳೆಯರು ಮತ್ತು ಜನರು, ವಾಪಸ್ ತೆರಳುವಂತೆ ಪಟ್ಟು ಹಿಡಿದರು.
ಯಾವುದೇ ಮಾಹಿತಿಯಿಲ್ಲದೆ ಮದ್ಯದಂಗಡಿಯನ್ನು ಗ್ರಾಮದಲ್ಲಿ ತೆರೆಯಲಾಗುತ್ತಿದ್ದು, ಒಂದು ವೇಳೆ ಮದ್ಯದಂಗಡಿಯನ್ನು ತೆರೆದರೆ ಪೆಟ್ರೋಲ್ ಹಾಕಿ ಅಂಗಡಿಯನ್ನು ಸುಟ್ಟು ಹಾಕುತ್ತೇವೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಈ ನಡುವೆ ಸ್ಥಳಕ್ಕೆ ಬಂದ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಮದ್ಯದಂಗಡಿ ಆರಂಭಿಸುತ್ತಿರುವ ಸ್ಥಳದ ಸಮೀಪ ಹಾಲಿನ ಡೈರಿಯಿದ್ದು ಬೆಳಗ್ಗೆ ಹಾಗೂ ಸಂಜೆ ಮಹಿಳೆಯರು ಮತ್ತು ಮಕ್ಕಳು ಹಾಲನ್ನು ಹಾಕಲು ಬರುತ್ತಾರೆ. ಹಿಂಭಾಗ ದೇಗುಲವಿದೆ. ಸುತ್ತಲೂ ರೈತರು ವ್ಯವಸಾಯ ಮಾಡುತ್ತಿದ್ದಾರೆ. ಇಲ್ಲಿ ಮದ್ಯದಂಗಡಿ ಆರಂಭಿಸಿದರೆ ಕುಡುಕರು ಜನರಿಗೆ ಕಿರುಕುಳ ನೀಡುತ್ತಾರೆ. ಸರಕಾರಿ ಮಳಿಗೆಯಲ್ಲಿ ಎಂಎಸ್ಐಎಲ್ ಮದ್ಯದಂಗಡಿ ಆರಂಭಿಸುವುದು ಯೋಗ್ಯವಲ್ಲ. ಸ್ಥಳಾಂತರಿಸಿ ಎಂದು ಆಗ್ರಹಿಸಿದರು.