ತುಮಕೂರು : ಜಿಲ್ಲೆಯಲ್ಲಿ ಕಳೆದ ಅನೇಕ ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಅದ್ರಲ್ಲೂ ಬರಪೀಡಿತ ತಾಲೂಕುಗಳಲ್ಲಿಯೂ ಭರ್ಜರಿ ಮಳೆಯಾಗಿದ್ದು, ಇದು ರೈತರಲ್ಲಿ ಸಂತಸ ತರುವ ಬದಲು ಈರುಳ್ಳಿ ಬೆಳೆಗಾರರಲ್ಲಿ ಕಣ್ಣೀರು ತರಿಸಿದೆ.
ಬರಪೀಡಿತ ತಾಲೂಕೆಂದೇ ಪರಿಗಣಿಸಲ್ಪಟ್ಟಿರುವ ಶಿರಾದಲ್ಲಿ ರೈತರು ಬಹುಪಾಲು ಈರುಳ್ಳಿ ಬೆಳೆಯುತ್ತಾರೆ. ಪೂರಕ ಮಳೆ ಇಲ್ಲದಿದ್ದರೂ ಅಂತರ್ಜಲ ಬಳಕೆ ಮಾಡಿಕೊಂಡು ಈರುಳ್ಳಿ ಬೆಳೆದಿದ್ದರು. ಹುಲಿಕುಂಟೆ ಹೋಬಳಿಯ ಕರೆಕಲ್ಲು ಹಟ್ಟಿ, ಕ್ಯಾಸಮುದ್ರ, ಮುಸುದಲೋಟಿ, ಎಂಜಲಗೆರೆ ಭಾಗದಲ್ಲಿ ಉತ್ತಮ ಈರುಳ್ಳಿ ಫಸಲು ಬಂದಿತ್ತು.
ಸತತ ನಾಲ್ಕು ತಿಂಗಳ ನಂತರ ಈರುಳ್ಳಿ ಬೆಳೆ ಕೈಗೆ ಬಂದಿತ್ತು. ಕೆಲವೇ ದಿನಗಳಲ್ಲಿ ಗುಣಮಟ್ಟದ ಈರುಳ್ಳಿ ಕೊಯ್ಲು ಮಾಡಿ ಮಾರುಕಟ್ಟೆಗೆ ಸಾಗಿಸಬೇಕಿತ್ತು. ಅಷ್ಟರೊಳಗೆ ಬಂದ ಮಳೆಯಿಂದ ಈರುಳ್ಳಿ ನೆಲದಲ್ಲಿಯೇ ಕೊಳೆತು ಹೋಗುತ್ತಿದೆ.
30ಕ್ಕೂ ಹೆಚ್ಚು ರೈತರು ಸುಮಾರು 100 ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದರು. ಎಕರೆಗೆ ಕನಿಷ್ಟ 30 ರಿಂದ 40 ಸಾವಿರ ರೂ. ಖರ್ಚು ಮಾಡಿ ಬೆಳೆ ಬೆಳೆಯಲಾಗಿತ್ತು. ಈ ಬಾರಿ ಉತ್ತಮ ಫಸಲು ಬಂದಿದ್ದರಿಂದಾಗಿ ಲಕ್ಷಾಂತರ ರೂ. ಆದಾಯದ ನಿರೀಕ್ಷೆಯಲ್ಲಿದ್ದರು.
ಆದರೆ, ನಿರಂತರ ಮಳೆಯಿಂದಾಗಿ ಈರುಳ್ಳಿ ಕೊಳೆತು ಹೋಗುತ್ತಿದೆ. ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಈರುಳ್ಳಿ ಬೆಳೆಗಾರರು ಅಪಾರ ನಷ್ಟ ಅನುಭವಿಸುವಂತಾಗಿದೆ.