ತುಮಕೂರು: ಸಕಾಲಕ್ಕೆ ಆಂಬ್ಯುಲೆನ್ಸ್ ಸೌಲಭ್ಯ ದೊರೆಯದೆ ಮಹಿಳೆಯೊಬ್ಬಳು ಮನೆಯಲ್ಲಿಯೇ ಮೃತಪಟ್ಟಿರುವ ಘಟನೆ ಮಧುಗಿರಿ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಐ.ಡಿ ಹಳ್ಳಿ ಗ್ರಾಮದ ಜಯಮ್ಮ (65) ಮೃತ ವೃದ್ಧೆ.
ಅನಾರೋಗ್ಯದಿಂದ ಬಳಲುತ್ತಿದ್ದ ಜಯಮ್ಮ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಲುವಾಗಿ ಕುಟುಂಬಸ್ಥರು ಆಂಬ್ಯುಲೆನ್ಸ್ಗೆ ಕರೆ ಮಾಡಿದ್ದರು. ಆದರೆ, ಕರೆ ಮಾಡಿ 50 ನಿಮಿಷಗಳ ಕಾಲ ಕಾದರೂ ಆಂಬ್ಯುಲೆನ್ಸ್ ಬರಲಿಲ್ಲ. ನಂತರ, ಕುಟುಂಬಸ್ಥರು ತಾಲೂಕು ಆರೋಗ್ಯಾಧಿಕಾರಿಗೆ ದೂರವಾಣಿ ಕರೆ ಮಾಡಿ, ಶೀಘ್ರವಾಗಿ ಆಂಬ್ಯುಲೆನ್ಸ್ ಕಳಿಸಿ ಕೊಡುವಂತೆ ಮನವಿ ಮಾಡಿಕೊಂಡರು.
ಮನವಿಗೆ ಸ್ಪಂದಿಸಿದ ಡಿಹೆಚ್ಒ ರಾಜ್ಯ ಆಂಬ್ಯುಲೆನ್ಸ್ ತುರ್ತು ಸಹಾಯವಾಣಿ 108ರಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದ್ದಲ್ಲದೇ, ಮಧುಗಿರಿಯಲ್ಲಿನ ಆಂಬ್ಯುಲೆನ್ಸ್ ಕಳುಹಿಸಿ ಕೊಡುವುದಾಗಿ ತಿಳಿಸಿದ್ದಾರೆ. ಬಳಿಕ ಆಂಬ್ಯುಲೆನ್ಸ್ ಬಂತಾದರೂ ಅಷ್ಟೊತ್ತಿಗಾಗಲೇ ವೃದ್ಧೆಯ ಪ್ರಾಣ ಪಕ್ಷಿ ಹಾರಿಹೋಗಿತ್ತು. ಸಕಾಲಕ್ಕೆ ಆಂಬ್ಯುಲೆನ್ಸ್ ಸೌಲಭ್ಯ ಸಿಕ್ಕಿದ್ದರೆ ಪ್ರಾಣ ಉಳಿಸಬಹುದಾಗಿತ್ತು ಎಂದು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: 108 ಆಂಬ್ಯುಲೆನ್ಸ್ ನಂಬರ್ ಕನೆಕ್ಟ್ ಆಗ್ತಿಲ್ವಾ? ಹಾಗಿದ್ರೆ ಈ ನಂಬರ್ಗೆ ಕರೆ ಮಾಡಿ
ಸುಮಾರು 50 ನಿಮಿಷಗಳ ಕಾಲ ನಮಗೆ ಆಂಬ್ಯುಲೆನ್ಸ್ ಸೌಲಭ್ಯ ದೊರೆತಿಲ್ಲ. ಟಿಹೆಚ್ಓ ಅವರಿಗೆ ಕರೆ ಮಾಡಿ ಮಾತನಾಡಿದಾಗ ಇದು ರಾಜ್ಯದ ಸಮಸ್ಯೆಯಾಗಿದೆ ಎಂದು ತಿಳಿಸಿ ನಂತರ ಮಧುಗಿರಿಯಲ್ಲಿನ ಆಂಬ್ಯುಲೆನ್ಸ್ ಕಳುಹಿಸಿ ಕೊಡುವುದಾಗಿ ತಿಳಿಸಿದ್ದರು. ಆದರೆ ಅದಾಗಲೇ ಮೃತಪಟ್ಟಿದ್ದರು ಎಂದು ಮೃತ ಜಯಮ್ಮ ಸಂಬಂಧಿ ರಾಮಾಂಜಿನಯ್ಯ ತಿಳಿಸಿದ್ದಾರೆ.