ತುಮಕೂರು: ತಾಲೂಕು ಮೆಳೇನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಪಾಠ ಶಾಲಾ ಕಟ್ಟಡ ಮೇಲ್ನೋಟಕ್ಕೆ ನೋಡಲು ಉತ್ತಮ ಸ್ವರೂಪದಲ್ಲಿರುವಂತೆ ಕಂಡರೂ ಅದು ದುಸ್ಥಿತಿಯಲ್ಲಿದ್ದು, ಅದರಲ್ಲೇ ಮಕ್ಕಳು ಪಾಠ ಕೇಳುವಂತಹ ಅನಿವಾರ್ಯತೆ ನಿರ್ಮಾಣವಾಗಿದೆ.
ತಾಲೂಕಿನ ಮೆಳೇನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕಟ್ಟಡ ದಶಕಗಳ ಹಿಂದೆ ನಿರ್ಮಾಣ ಮಾಡಿರುವ ಕಟ್ಟಡವಾಗಿದೆ. ಇದರಲ್ಲಿರುವ ಹಂಚುಗಳು, ಮೇಲ್ಛಾವಣಿ ಹಾಳಾಗಿದೆ. ಈ ಮೇಲ್ಛಾವಣಿ ಮಕ್ಕಳ ಮೇಲೆ ಬಿದ್ದು ಅವಘಡ ಸಂಭವಿಸಿದ್ದವು. ಹೀಗಾಗಿ ಸ್ಥಳೀಯರು ಮೇಲ್ಛಾವಣಿ ದುರಸ್ತಿ ಪಡಿಸಲು ದಾನಿಗಳಿಂದ ಹಣ ಪಡೆದು ತಗಡಿನ ಶೀಟ್ಗಳನ್ನು ಹಾಕಿಸಿದ್ದರು. ಆದರೆ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಶಾಲೆಯಲ್ಲಿ ಕುಳಿತು ಮಕ್ಕಳು ಪಾಠ ಕೇಳಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಶಾಲೆಗೆ ಶೀಟ್ಗಳನ್ನು ಹಾಕಿರುವುದರಿಂದ ಅವು ತುಕ್ಕು ಹಿಡಿದಿದ್ದು, ಮಳೆಗಾಲದಲ್ಲಿ ಶೀಟ್ಗಳ ಮೇಲೆ ಮಳೆ ನೀರು ಬಿದ್ದು ಶಾಲೆ ಕೊಠಡಿಯೊಳಗೆ ನೀರು ಬಂದು ಅಸ್ತವ್ಯಸ್ತ ಉಂಟಾಗುತ್ತಿದೆ. ಸರ್ಕಾರಿ ಶಾಲೆಯಾಗಿದ್ದರೂ ಶಿಕ್ಷಣ ಇಲಾಖೆ ಮೌನ ವಹಿಸುವ ಮೂಲಕ ಜಾಣ ಕುರುಡುತನ ಪ್ರದರ್ಶಿಸುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಇನ್ನೂ ಮುಂದಾದರೂ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯಗೆ ಸೂಕ್ತ ಕ್ರಮ ಕೈಗೊಳ್ಳಲ್ಲಿ ಎಂಬುದು ಜನರ ಮನವಿಯಾಗಿದೆ.