ತುಮಕೂರು: ಅಧಿಕಾರಿಗಳು ಯಾವ ವಿಷಯವೇ ಆಗಲಿ ಸಮಿತಿಯ ಗಮನಕ್ಕೆ ತರದೆ ಯಾರಿಗೂ ನೋಟಿಸ್ ನೀಡಬಾರದು ಎಂದು ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮಹಾನಗರ ಪಾಲಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸ್ಥಾಯಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸೌದೆಗಳನ್ನು ಬಳಸುವಂತಿಲ್ಲ ಎಂದು ಅಧಿಕಾರಿಗಳು ಯಾರ ಗಮನಕ್ಕೂ ತರದೆ ನೋಟಿಸ್ ನೀಡಿದ್ದೀರಿ. ತುಮಕೂರು ಜಿಲ್ಲೆ ಬರಗಾಲದಿಂದ ಕೂಡಿದೆ. ರೈತರು ತೆಂಗಿನ ಚಿಪ್ಪಿನಿಂದ, ಮೊಟ್ಟೆಯಿಂದ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಅವರಿಗೆ ನೀವು ನೋಟಿಸ್ ನೀಡುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಸಂಬಂಧಪಟ್ಟವರ ಗಮನಕ್ಕೆ ತರದೆ ನೋಟಿಸ್ ನೀಡುವ ಮೂಲಕ ನಿಮಗೆ ನೀವೇ ಸುಪ್ರೀಂ ಎಂದುಕೊಂಡಿದ್ದೀರಾ? ಇನ್ನು ಮುಂದೆ ನಮ್ಮ ಗಮನಕ್ಕೆ ತರದೆ ಯಾವುದೇ ನೋಟಿಸ್ ನೀಡಬೇಡಿ ಎಂದು ಸೈಯದ್ ನಯಾಜ್, ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಎಲ್ಲಾ ಪೌರ ಕಾರ್ಮಿಕರಿಗೆ ನೀಡುತ್ತಿರುವ ಸಹಾಯಧನ ಸರಿಯಾದ ರೀತಿಯಲ್ಲಿ ವಿತರಣೆಯಾಗುತ್ತಿಲ್ಲ ಎಂದರು.
ಪರಿಶಿಷ್ಟ ಜಾತಿ ಕಲ್ಯಾಣ ಕಾರ್ಯಕ್ರಮಗಳಿಗೆ ಬಿಡುಗಡೆಯಾಗಿರುವ ಅನುದಾನವನ್ನು ಬಳಸಿಕೊಂಡು, ಆ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೇಕಾದಂತೆ ಪರಿಕರಗಳನ್ನು ನೀಡುವುದು, ವಿಕಲಚೇತನರಿಗೆ ಚಿಕಿತ್ಸೆಯ ವೆಚ್ಚ ಭರಿಸುವುದು, ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಆಗಬೇಕಿದೆ ಎಂದು ಸಭೆಯಲ್ಲಿ ಚರ್ಚೆ ನಡೆಸಲಾಯಿತು.