ತುಮಕೂರು : ಹುಳಿಯಾರು ಪೊಲೀಸ್ ಠಾಣೆಯ ಮಹಿಳಾ ಕಾನ್ಸ್ಟೇಬಲ್ ಸುಧಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತ ಸುಧಾ ಅವರ ಚಿಕ್ಕಪ್ಪನ ಮಗನಾದ ಮಂಜುನಾಥ್ ಕೊಲೆ ಮಾಡಿರುವ ಬಗ್ಗೆ ಬರೆದಿರುವ ಬರೋಬ್ಬರಿ 13 ಪುಟಗಳ ಡೆತ್ ನೋಟ್ ಪತ್ತೆಯಾಗಿದೆ. ವೈಯಕ್ತಿಕ ದ್ವೇಷಕ್ಕಾಗಿ ತಾನು ಅಕ್ಕನನ್ನು ಕೊಲೆ ಮಾಡಿರುವುದಾಗಿ ಆರೋಪಿ ಬರೆದಿದ್ದನು.
ಪ್ರಕರಣ ಹಿನ್ನೆಲೆ : ಸೆಪ್ಟೆಂಬರ್ 13 ರಿಂದ ಮಗಳು ಕಾಣೆಯಾಗಿದ್ದಾಳೆ ಎಂದು ಸುಧಾ ಅವರ ತಾಯಿ ಹುಳಿಯಾರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸೆಪ್ಟೆಂಬರ್ 16ರಂದು ಶಿವಮೊಗ್ಗದ ವಸತಿಗೃಹ ಒಂದರಲ್ಲಿ ಸುಧಾ ಅವರ ಚಿಕ್ಕಪ್ಪನ ಮಗ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದ. ತನ್ನ ಅಕ್ಕ ಸುಧಾ ಅವರನ್ನು ವೈಯಕ್ತಿಕ ಕಾರಣಗಳಿಗಾಗಿ ಕೊಲೆ ಮಾಡಿರುವುದಾಗಿ ಮಂಜುನಾಥ ಬರೋಬ್ಬರಿ 13 ಪುಟಗಳ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದನು.
ವೈಯಕ್ತಿಕ ದ್ವೇಷದಿಂದ ಕೊಲೆ : ಅಲ್ಲದೆ ತನಿಖೆ ವೇಳೆ ಈ ಕೊಲೆ ಪ್ರಕರಣದ ಮತ್ತೋರ್ವ ಆರೋಪಿ, ಮೃತ ಮಂಜುನಾಥನ ಗೆಳೆಯ ಕೆಸರುಗೊಡನಹಳ್ಳಿಯ ನಿಖೇಶ್ನನ್ನು ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿ ಸೆಪ್ಟೆಂಬರ್ 17 ರಂದು ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದ ರಸ್ತೆ ಬಳಿ ಶವವನ್ನು ಬಿಸಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದ.
ಜೊತೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಳಿಯಾರು ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ರಾಣಿ ಎಂಬವರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಅವರನ್ನು ಕೂಡ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ : ಅರಸೀಕೆರೆಯಲ್ಲಿ ಅಕ್ಕನನ್ನು ಕೊಂದು ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡ ತಮ್ಮ