ತುಮಕೂರು : ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಎಲ್ಲಾ ಕಾರ್ಮಿಕರಿಗೆ ಸನ್ಮಾನ ಮಾಡಬೇಕು. ಆದರೆ, ಕೆಲ ನಿರ್ದಿಷ್ಟ ಕಾರ್ಮಿಕರಿಗೆ ಮಾತ್ರ ಸನ್ಮಾನಿಸಲಾಗಿದೆ ಎಂದು ಪಾಲಿಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ನಗರದ ಬಾಲಭವನದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕೆ ಕೆಲ ಕಾರ್ಪೊರೇಟರ್ಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ 35 ವಾರ್ಡ್ಗಳಿವೆ. ಪೌರ ಕಾರ್ಮಿಕರು ಹಗಲಿರುಳು ಶ್ರಮವಹಿಸಿ ಕೆಲಸ ನಿರ್ವಹಿಸುತ್ತಿದ್ದಾರೆ.
ಆದರೆ, ಖಾಯಂಗೊಂಡಿರುವ ಪೌರಕಾರ್ಮಿಕರಿಗೆ ಮಾತ್ರ ಸನ್ಮಾನ ಮಾಡುತ್ತಿರುವುದು ಸರಿಯಲ್ಲ. ಆದ್ಯತೆ ಮೇರೆಗೆ ಪೌರ ಕಾರ್ಮಿಕರನ್ನು ಖಾಯಂಗೊಳಿಸಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ದೂರಿದರು.
ಕಾರ್ಯಕ್ರಮದಲ್ಲೂ ಸಹ ಸನ್ಮಾನ ಮಾಡಲು ತಾರತಮ್ಯ ಹಾಗೂ ರಾಜಕೀಯ ಮಾಡುತ್ತಿರುವುದಕ್ಕೆ ತುಮಕೂರು ಮಹಾನಗರ ಪಾಲಿಕೆಯ ವಿರೋಧಪಕ್ಷದ ನಾಯಕ ಜೆ ಕುಮಾರ್ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನಯಾಜ್ ಅಹಮದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
2008ರಿಂದ ಈವರೆಗೂ ಪೌರಕಾರ್ಮಿಕರಿಗೆ ಸಾಕಷ್ಟು ಸರ್ಕಾರಿ ಸೌಲಭ್ಯಗಳು ದೊರಕುತ್ತಿದ್ದವು. ಆದರೆ, ದಿನ ಕಳೆದಂತೆ ಪೌರ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ಸರ್ಕಾರಿ ಸೌಲಭ್ಯಗಳನ್ನು ಆಡಿಟ್ ವರದಿ ನೆಪವೊಡ್ಡಿ ಸಾಕಷ್ಟು ಕಾರ್ಯಕ್ರಮಗಳನ್ನು ಕಡಿತಗೊಳಿಸಿದ್ದಾರೆ. ಅವರ ಕುಟುಂಬಗಳು ಅತಂತ್ರದಲ್ಲಿವೆ.
ಇಂತಹ ಪರಿಸ್ಥಿತಿಯಲ್ಲಿ ಅವರನ್ನು ಉತ್ತೇಜಿಸುವ ಬದಲು ತಾರತಮ್ಯ ನೀತಿ ಅನುಸರಿಸಿ ಸನ್ಮಾನ ಮಾಡಲಾಗುತ್ತದೆ. ಇನ್ನು ಖಾಯಂ ವಿಚಾರದಲ್ಲಿ ಸಾಕಷ್ಟು ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಹಿರಿಯ ಪೌರ ಕಾರ್ಮಿಕರನ್ನು ಸನ್ಮಾನಿಸದೆ ಕಡೆಗಣಿಸಲಾಗುತ್ತಿದೆ. ಇದು ನಿಜಕ್ಕೂ ಖಂಡನೀಯ ಎಂದು ನಯಾಜ್ ಅಹಮದ್ ಆಕ್ರೋಶ ವ್ಯಕ್ತಪಡಿಸಿದರು.