ತುಮಕೂರು: ಕೋವಿಡ್ ಸೋಂಕು ಭೀತಿ ಸಂದರ್ಭದಲ್ಲಿ ಮೈಸೂರಿನಲ್ಲಿ ಐಎಎಸ್ ಅಧಿಕಾರಿಗಳ ಜಟಾಪಟಿ ಸರಿಯಲ್ಲ ಎಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತುಮಕೂರು ತಾಲೂಕು ಹೊನ್ನುಡಿಕೆಯಲ್ಲಿ ಮಾತನಾಡಿದ ಅವರು, ಐಎಸ್ಎಸ್ ಅಧಿಕಾರಿಗಳ ಜಗಳದ ಬಗ್ಗೆ ಚರ್ಚೆ ಮಾಡಲ್ಲ. ಆದರೆ ಇಂತಹ ಕಠಿಣ ಸಂದರ್ಭದಲ್ಲಿ ವೈಯಕ್ತಿಕ ಜಗಳ ಸರಿಯಲ್ಲ ಎಂದು ಹೇಳಬಲ್ಲೆ, ಆದರೆ ಆಶಾ ಕಾರ್ಯಕರ್ತೆಯರಿಗೆ ಮೂರು ತಿಂಗಳ ವೇತನ ಹಾಗೂ ಅಂಗನವಾಡಿ ಇಂಟೆನ್ಸೇಟಿವ್ ಕೊಟ್ಟಿಲ್ಲ, ಆದರೆ ಇಂತಹ ಸಂದರ್ಭದಲ್ಲಿ ಸ್ವಿಮ್ಮಿಂಗ್ ಫೂಲ್ ಕಟ್ಟುವುದಕ್ಕೆ , ಮೋಜು ಮಸ್ತಿಗಾಗಿ ಸರ್ಕಾರದ ಹಣ ಪೋಲು ಮಾಡುವುದು ಸರಿಯಲ್ಲ ಎಂದಷ್ಟೇ ನಾನು ಹೇಳಬಲ್ಲೆ ಎಂದು ತಿಳಿಸಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆ ಕುರಿತು ಮಾತನಾಡಿ, ಈಗಾಗಲೇ ಹೆಚ್.ಡಿ ಕುಮಾರಸ್ವಾಮಿಯವರು ಹೇಳಿರುವಂತೆ ಪಿಯುಸಿ ಪರೀಕ್ಷೆ ರದ್ದುಗೊಳಿಸಿ ಎಸ್ಎಸ್ಎಲ್ಸಿ ಮಕ್ಕಳಿಗೆ ಪರೀಕ್ಷೆ ನಡೆಸುವುದು ಎಷ್ಟು ಸೂಕ್ತ, ಇದರ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಮುಂದಾಗಿರುವ ಸರ್ಕಾರ ಭವಿಷ್ಯದ ಪ್ರಜೆಗಳ ಕುರಿತು ಯಾವ ರೀತಿಯಾದ ಆಲೋಚನೆ ಮಾಡಿದೆ ಎಂಬುದನ್ನು ನಾವು ಗಮನಿಸಬೇಕು. ಮಕ್ಕಳಿಗೆ ಪರೀಕ್ಷೆ ನಡೆಸುತ್ತೇವೆ ಆದರೆ ಫೇಲು ಮಾಡುವುದಿಲ್ಲ ಎಂದು ಹೇಳಿಕೆ ನೀಡುವುದು ಎಷ್ಟು ಸರಿ. ಫೇಲ್ ಮಾಡಲ್ಲ ಎಂದ ಮೇಲೆ ಎಲ್ಲರನ್ನೂ ಫಾಸ್ ಮಾಡಿ ಇಲ್ಲವೇ ಪರೀಕ್ಷೆಯನ್ನು ಮುಂದೂಡಿ ಪ್ರಪಂಚ ಮುಳುಗಿ ಹೋಗುವುದಿಲ್ಲ. ದಯವಿಟ್ಟು ಮಕ್ಕಳನ್ನು ಉಳಿಸುವಂತಹ ಕೆಲಸ ಮಾಡಿ, ಸಾಯುವಂತ ಕೆಲಸ ಬೇಡ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇದನ್ನು ಓದಿ: ರೋಹಿಣಿ ಸಿಂಧೂರಿ, ಶಿಲ್ಪಾ ನಾಗ್ ಎತ್ತಂಗಡಿ: IAS ಮಹಿಳಾಮಣಿಗಳ ಜಗಳಕ್ಕೆ ಈ ಶಿಕ್ಷೆ!