ತುಮಕೂರು: ಗುಬ್ಬಿ ವಿಧಾನಸಭ ಕ್ಷೇತ್ರದಿಂದ ಮೂರು ಬಾರಿ ಜೆಡಿಎಸ್ ಮತ್ತು ಒಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸತತ ನಾಲ್ಕು ಬಾರಿ ಶಾಸಕರಾಗಿರುವ ಎಸ್ ಆರ್ ಶ್ರೀನಿವಾಸ್ ಇದೇ ಮೊದಲ ಬಾರಿಗೆ ಕಾಂಗ್ರೆಸ್ ನಿಂದ ಕಣಕ್ಕಿಳಿಯಲಿದ್ದಾರೆ. ಕಳೆದ ಲೋಕಸಭೆ ಚುನಾವಣೆ ನಂತರ ದಳಪತಿಗಳ ಜೊತೆ ಮುನಿಸಿಕೊಂಡು ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದರು. ಎಚ್ ಡಿ ಕುಮಾರಸ್ವಾಮಿ ವಿರುದ್ಧವು ಶ್ರೀನಿವಾಸ್ ಗುಟುರು ಹಾಕಿದ್ದರು.
ಈ ಹಿನ್ನೆಲೆ ಆರು ತಿಂಗಳ ಮೊದಲೇ ಗುಬ್ಬಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಸರು ಪ್ರಕಟಿಸಿ ಎಸ್ ಆರ್ ಶ್ರೀನಿವಾಸ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ನಂತರ ನಡೆದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಕಡೆಗೆ ಶ್ರೀನಿವಾಸ್ ವಾಲಿದ್ದರು. ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡು ಯಾತ್ರೆಯಲ್ಲಿ ಭಾಗವಹಿಸಿದಾಗ ಪಕ್ಷ ಸೇರುವುದು ಖಚಿತವಾಗಿತ್ತು.
ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆ ಮುನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು ಎಸ್ ಆರ್ ಶ್ರೀನಿವಾಸ್. ಇದಕ್ಕೆ ಗುಬ್ಬಿ ತಾಲೂಕಿನಲ್ಲಿ ಕಾಂಗ್ರೆಸ್ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅವರ ಸೇರ್ಪಡೆ ನಂತರವೂ ವಿರೋಧ ಮಾಡುವುದು ನಿಂತಿಲ್ಲ. ಭಿನ್ನಮತವನ್ನು ಶಮನಗೊಳಿಸಲು ಚುನಾವಣೆ ಜಯಿಸುವ ಸವಾಲು ಎದುರಾಗಿದೆ. ಇನ್ನು ಕಾಂಗ್ರೆಸ್ ಸೇರ್ಪಡೆ ನಂತರವೂ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಸ್ಥಳೀಯ ಕಾಂಗ್ರೆಸ್ ಮುಖಂಡ ಹಾಗು ಗುಬ್ಬಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಸನ್ನ ಕುಮಾರ್ ಅವರನ್ನು ಪಕ್ಷ ಉಚ್ಚಾಟನೆ ಕೂಡ ಮಾಡಿದೆ.
ಹೆಚ್ಡಿಕೆ ಗುಬ್ಬಿ ಶ್ರೀನಿವಾಸ್ ನಡುವೆ ವಾಕ್ಸಮರ: ಹೆಚ್ ಡಿ ಕುಮಾರಸ್ವಾಮಿ ಹಾಗೂ ಎಸ್ ಆರ್ ಶ್ರೀನಿವಾಸ್ ನಡುವೆ ಕಳೆದು ಒಂದು ವರ್ಷದಿಂದ ಮಾತಿನ ಸಮರ ನಡೆಯುತ್ತಿದೆ. ಅಲ್ಲದೇ ಹೆಚ್ ಡಿ ಕುಮಾರಸ್ವಾಮಿ ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಬಂದು ನಾಗರಾಜ ಎಂಬವರನ್ನು ಪರಿಚಯಿಸಿದ್ದರು. ಅಷ್ಟೇ ಅಲ್ಲ ಅವರೇ ಮುಂದಿನ ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆ ಮಾಡಿ ಹೋಗಿದ್ದರು. ಹೀಗಾಗಿ ನಾಗರಾಜ್ ಕೂಡ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಪರವಾಗಿ ಹಾಗೂ ಅಭ್ಯರ್ಥಿ ಎಂದೇ ಬಿಂಬಿಸಿಕೊಂಡು ಸಾಕಷ್ಟು ರಾಜಕೀಯ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ಅಲ್ಲದೇ ಎಸ್ ಆರ್ ಶ್ರೀನಿವಾಸ್ ಬೆಂಬಲಿತರನ್ನು ದೂರ ಇಟ್ಟು ಪ್ರತ್ಯೇಕವಾಗಿ ಸಂಘಟನೆಯಲ್ಲಿ ತೊಡಗಿದ್ದಾರೆ. ಶ್ರೀನಿವಾಸ ಬೆಂಬಲಿತ ಜೆಡಿಎಸ್ ಚುನಾಯಿತ ಸದಸ್ಯರು ನಾಗರಾಜ್ ಅವರಿಗೂ ಕೂಡ ಯಾವುದೇ ರೀತಿಯಲ್ಲೂ ಸಂಘಟನೆಗೆ ಸಾತ್ ನೀಡಿಲ್ಲ. ಆದರೆ, ಪರೋಕ್ಷವಾಗಿ ಎಸ್ ಆರ್ ಶ್ರೀನಿವಾಸ್ ಅವರ ಪರವಾಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
ಇನ್ನೊಂದೆಡೆ ಎಸ್ ಆರ್ ಶ್ರೀನಿವಾಸ್ ಕೂಡ ತಮ್ಮ ವೈಯಕ್ತಿಕ ವರ್ಚಸ್ಸಿನೊಂದಿಗೆ ಕ್ಷೇತ್ರದಾದ್ಯಂತ ಸಾಕಷ್ಟು ಸಂಘಟನೆ ಮಾಡಿಕೊಂಡಿದ್ದಾರೆ. ಈ ಹಿಂದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿದ್ದ ಶ್ರೀನಿವಾಸ್ ಅದೇ ರೀತಿಯ ವರ್ಚಸ್ಸುನೊಂದಿಗೆ ಕ್ಷೇತ್ರದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಇತ್ತೀಚಿಗಷ್ಟೇ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರನ್ನು ಕೂಡ ಭೇಟಿಯಾಗಿ ಪಕ್ಷ ಸೇರ್ಪಡೆಗೊಳ್ಳುವುದಾಗಿ ತಿಳಿಸಿದ್ದರು.
ಅದರಂತೆ ಸ್ಥಳೀಯವಾಗಿ ಕಾಂಗ್ರೆಸ್ ಮುಖಂಡರಾದ ಪ್ರಸನ್ನಕುಮಾರ್ ಹಾಗೂ ವನ್ನಗಿರಿಗೌಡ ಅವರ ನಿರಂತರ ವಿರೋಧದ ನಡುವೆಯೂ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅಲ್ಲದೆ ಇಬ್ಬರನ್ನು ಕೂಡ ಜೊತೆಯಲ್ಲಿ ಕೊಂಡೊಯ್ಯುವುದಾಗಿ ಹಾಗೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಭರವಸೆ ನೀಡಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಟಿಕೆಟ್ ಘೋಷಣೆ ಚನ್ನಗಿರಿ ವಡ್ನಾಳ್ ರಾಜಣ್ಣ ಅಭಿಮಾನಿಗಳ ಅಸಮಾಧಾನ