ತುಮಕೂರು: ಸಾರ್ವಜನಿಕರಲ್ಲಿ ಆರೋಗ್ಯ ಹಾಗೂ ಪೌಷ್ಟಿಕ ಆಹಾರದ ಬಗ್ಗೆ ಅರಿವು ಮೂಡಿಸುವ ಹಿನ್ನಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಪೋಷಣ್ ಮಾಸಾಚರಣೆ ಹಿನ್ನೆಲೆಯಲ್ಲಿ ಪೋಷಣ್ ಅಭಿಯಾನ ರಥಕ್ಕೆ ಶಾಸಕ ಜ್ಯೋತಿಗಣೇಶ್ ಹಾಗೂ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷೆ ಲತಾ ರವಿಕುಮಾರ್ ಚಾಲನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪೋಷಣ್ ಅಭಿಯಾನ ರಥಕ್ಕೆ ಚಾಲನೆ ನೀಡಿ, ರಥದಲ್ಲಿರುವ ಭಿತ್ತಿ ಪತ್ರಗಳ ಬಗ್ಗೆ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷೆ ಲತಾ ರವಿಕುಮಾರ್ ಹಾಗೂ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಮಾಹಿತಿ ಪಡೆದುಕೊಂಡರು. ಕೇಂದ್ರ ಸರ್ಕಾರದ ಯೋಜನೆಯಾಗಿರುವ ಪೋಷಣ್ ಮಾಸಾಚರಣೆ, ಸಾರ್ವಜನಿಕರಿಗೆ ಆಹಾರದಲ್ಲಿರುವ ಪೋಷಕಾಂಶಗಳ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂಗನವಾಡಿ ಕೇಂದ್ರದಲ್ಲಿರುವ ಮಕ್ಕಳ ತಾಯಿಯಂದಿರರಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಯಾವ ರೀತಿಯ ಪೌಷ್ಟಿಕ ಆಹಾರವನ್ನು ಸೇವನೆ ಮಾಡಬೇಕು ಎಂಬುದರ ಬಗ್ಗೆ ಈ ರಥದ ಮೂಲಕ ಜಾಗೃತಿ ಮೂಡಿಸಲಾಗುವುದು. ಅಲ್ಲದೇ ಅಂಗನವಾಡಿ ಕೇಂದ್ರಗಳ ಮುಂಭಾಗ ಸ್ಥಳಾವಕಾಶವಿದ್ದರೆ, ಅದನ್ನು ಸದುಪಯೋಗ ಮಾಡಿಕೊಂಡು ಕೈತೋಟದ ಮೂಲಕ ತರಕಾರಿಗಳನ್ನು ಬೆಳೆದು ಸೇವಿಸುವ ಮೂಲಕ ತಮ್ಮ ಆರೋಗ್ಯವನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದರ ಬಗ್ಗೆ ಈ ರಥದಲ್ಲಿ ಮಾಹಿತಿ ದೊರೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕ ನಟರಾಜು ತಿಳಿಸಿದರು.