ತುಮಕೂರು: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಚಿವ ವಿ.ಸೋಮಣ್ಣ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ನಮಿಸಿ, ವಿಶೇಷ ಪೂಜೆ ಸಲ್ಲಿಸಿದರು. ಸಚಿವರ ಜೊತೆ ಸಂಸದ ಜಿ.ಎಸ್.ಬಸವರಾಜು, ಶಾಸಕ ಜ್ಯೋತಿ ಗಣೇಶ್, ಜಿಲ್ಲಾಧ್ಯಕ್ಷ ರವಿಶಂಕರ್ ಸೇರಿದಂತೆ ಹಲವು ಬಿಜೆಪಿ ನಾಯಕರಿದ್ದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಶಿವಕುಮಾರ ಮಹಾಸ್ವಾಮಿಗಳು ರಾಷ್ಟ್ರ ಕಂಡ ಮಹಾ ತಪಸ್ವಿಗಳು. ಅನ್ನದಾತರು, ವಿದ್ಯಾ ದಾನಿಗಳು. ನಮಗೂ ಪೂಜ್ಯರಿಗೂ ಅವಿನಾಭಾವ ಸಂಬಂಧ ಇತ್ತು. ನಾವು ಯಾವುದೇ ಶುಭ ಕಾರ್ಯ ನಡೆಸಬೇಕೆಂದರೂ ಮೊದಲು ಮಠಕ್ಕೆ ಭೇಟಿ ಕೊಟ್ಟು ಶ್ರೀಗಳ ಅಶೀರ್ವಾದ ಪಡೆಯುತ್ತೇವೆ. ಏಪ್ರಿಲ್ 1ಕ್ಕೆ ಮಠಕ್ಕೆ ಬೇಟಿ ನೀಡಬೇಕಿತ್ತು. ಚುನಾವಣಾ ನಿಂತಿ ಸಹಿತೆ ಜಾರಿ ಇದ್ದ ಕಾರಣ ಬರಲು ಆಗಿರಲಿಲ್ಲ. ಚುಂಚನಗಿರಿ ಹಾಗೂ ಸಿದ್ದಗಂಗಾ ಮಠದ ಶ್ರೀಗಳಿಬ್ಬರು ನನಗೆ ಆರಾಧ್ಯ ದೈವ" ಎಂದು ಹೇಳಿದರು.
ಇದನ್ನೂ ಓದಿ: ಭಾರತದ ಸೂಜಿ ಮೊನೆಯಷ್ಟು ಜಾಗವನ್ನೂ ಅತಿಕ್ರಮಿಸಲು ಬಿಡೆವು: ಚೀನಾಗೆ ಅಮಿತ್ ಶಾ ಎಚ್ಚರಿಕೆ
ಟಿಕೆಟ್ ವಿಚಾರವಾಗಿ ಪ್ರತಿಕ್ರಿಯಿಸಿ, "ನಾನು ಹೈಕಮಾಂಡ್ ಅಲ್ಲ. ಟಿಕೆಟ್ ಕೊಡುವುದು, ಬಿಡುವುದು ವರಿಷ್ಠರಿಗೆ ಬಿಟ್ಟಿದ್ದು. ಅರ್ಹತೆ ಇರುವವರಿಗೆ ಕೊಡುತ್ತಾರೆ. ಗುಬ್ಬಿ ಕ್ಷೇತ್ರದಿಂದ ನನ್ನ ಮಗನಿಗೆ ಟಿಕೆಟ್ ನೀಡಿದರೆ ಕೆಲಸ ಮಾಡುತ್ತಾನೆ. ಕೊಟ್ಟರೆ ಸಂತೋಷ ಕೊಡದೇ ಹೋದರೂ ತೊಂದರೆ ಇಲ್ಲ, ವರಿಷ್ಠರಿಗಿದು ಪ್ರತಿಷ್ಠೆಯ ಚುನಾವಣೆ. ರಾಜ್ಯ ರಾಜಕಾರಣದಲ್ಲಿ ಡಬಲ್ ಇಂಜಿನ್ ಸರ್ಕಾರ ಅನೇಕ ಜನಪರ ಕೆಲಸಗಳನ್ನು ಮಾಡಿದೆ ಎಂದರು.
"ಗುಬ್ಬಿ ಕ್ಷೇತ್ರದ ಟಿಕೆಟ್ ಬಗ್ಗೆ ನಿನ್ನೆ ಬಸವರಾಜ್ ಅವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಒಂದು ಕುಟುಂಬಕ್ಕೆ ಎರಡು ಮಕ್ಕಳಿಗೆ ಟಿಕೆಟ್ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಹೈಕಮಾಂಡ್ ಯೋಚನೆ ಮಾಡುತ್ತಿದೆ. ಒಂದು ಕುಟುಂಬಕ್ಕೆ ಎರಡು ಟಿಕೆಟ್ ಇಲ್ಲ. ಯಡಿಯೂರಪ್ಪ ಅವರು ತಮ್ಮ ಕ್ಷೇತ್ರವನ್ನು ಮಗನಿಗೆ ಬಿಟ್ಟು ಕೊಟ್ಟಿದ್ದಾರೆ. ಗೋವಿಂದ ಕಾರಜೋಳ, ಎಂಟಿಬಿ ನಾಗರಾಜ್ ಸೇರಿದಂತೆ ಐದಾರು ಜನರು ಇದ್ದಾರೆ. ಗೆಲ್ಲುವ ಸಾಧ್ಯತೆ ಇರುವ ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಯಲ್ಲಿವೆ. ಹಾಗಾಗಿ ಟಿಕೆಟ್ ನೀಡಿದರೆ ಚುನಾವಣೆಯಲ್ಲಿ ನಿಲ್ಲಿಸುತ್ತೇವೆ" ಎಂದು ಹೇಳಿದರು.