ತುಮಕೂರು: ಜಿಲ್ಲೆಯಲ್ಲಿ ಜೆಡಿಎಸ್ ವೀಕ್ ಆಗಿದೆ ಎಂದು ಜೆಡಿಎಸ್ ಮುಖಂಡರು ಬೇರೆ ಪಕ್ಷದತ್ತ ಮುಖಮಾಡಿದ್ದಾರೆ. ಆದರೆ ಬಿಜೆಪಿ ಪಕ್ಷ ಜಿಲ್ಲೆಯಲ್ಲಿ ಬಲಿಷ್ಠವಾಗಿದ್ದು ಯಾವುದೇ ತೊಂದರೆಯಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.
'ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದು, ಎಲ್ಲಾ ಪಕ್ಷದ ಶಾಸಕರಿಗೆ ಕಾನೂನು ವ್ಯಾಪ್ತಿಯಲ್ಲಿ ಕೊಡಬೇಕಾದಂತಹ ಗೌರವ ಕೊಡಬೇಕೋ ಅದನ್ನು ಕೊಡುತ್ತಿದ್ದೇನೆ. ಅದು ನನ್ನ ಜವಾಬ್ದಾರಿ ಕೂಡ ಆಗಿದೆ. ಸರಕಾರಿ ವ್ಯವಸ್ಥೆಯನ್ನು ರಾಜಕೀಯವಾಗಿ ತೆಗೆದುಕೊಂಡು ಹೋಗಲು ನನ್ನಿಂದ ಸಾಧ್ಯವಿಲ್ಲ. ಅದನ್ನು ನಾನು ಸ್ಪಷ್ಟಪಡಿಸುತ್ತೇನೆ' ಎಂದರು.
'ಆದ್ರೆ ಬೇರೆ ಪಕ್ಷದ ಶಾಸಕರ ಕೈ ಕೆಳಗೆ ನಾನಿಲ್ಲ. ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕರು ನೀರಾವರಿ ಸಲಹಾ ಸಮಿತಿಯಲ್ಲಿ ಸದಸ್ಯರಿರುತ್ತಾರೆ. ಅವರು ಹೇಳಿಕೆಗಳನ್ನು ನಾನು ಪರಿಗಣಿಸಬೇಕಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿನ ಜವಾಬ್ದಾರಿ ನನ್ನ ಮೇಲಿದೆ' ಎಂದು ಹೇಳಿದರು.
'ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿನ ಗೂಳೂರು ಗ್ರಾಮದಲ್ಲಿ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿ, ಹೇಮಾವತಿ ನೀರು ಹರಿಸಲಾಗುವುದು ಎಂದು ನಾನು ಹೇಳಿರುವುದು ಸತ್ಯ, ನಾನು ಅದಕ್ಕೆ ಬದ್ಧನಾಗಿದ್ದೇನೆ. ನೀರು ನಿಗದಿಪಡಿಸುವುದು ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡರದ್ದಾಗಲಿ ಬೇರೆ ಜನಪ್ರತಿನಿಧಿಗಳದ್ದಾಗಲಿ ಜವಾಬ್ದಾರಿ ಅಲ್ಲ' ಎಂದರು.