ತುಮಕೂರು: ಅಂತರ್ಜಲ ಕುಸಿತಗೊಂಡಿರುವ ರಾಜ್ಯದ 14 ಜಿಲ್ಲೆಗಳ 41 ತಾಲ್ಲೂಕುಗಳಲ್ಲಿ ಅಟಲ್ ಭೂಜಲ ಯೋಜನೆಯಡಿ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಅಂತರ್ಜಲ ನಿರ್ದೇಶನಾಲಯ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಅಟಲ್ ಭೂಜಲ ಯೋಜನೆ ಕಾಮಗಾರಿ ಅನುಷ್ಠಾನ ಕಾರ್ಯಕ್ರಮವನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದರು.
ಅಟಲ್ ಭೂಜಲ ಯೋಜನೆಯನ್ನು ಪ್ರಧಾನಿ ಮೋದಿ 2019 ರ ಡಿ.25ರಂದು ರಾಷ್ಟ್ರಕ್ಕೆ ಸಮರ್ಪಿಸಿರುತ್ತಾರೆ. ಈ ಯೋಜನೆಯನ್ನು ಕೇಂದ್ರ ಮತ್ತು
ರಾಜ್ಯ ಸರ್ಕಾರಿ ಸಂಸ್ಥೆಗಳು, ಪಂಚಾಯತ್ ರಾಜ್ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ನೀರು ಬಳಕೆದಾರರ ಸಂಘಗಳನ್ನ ಬಳಸಿಕೊಂಡು ರೈತರ ಆದಾಯವನ್ನು ದ್ವಿಗುಣಗೊಳಿಸುವ ಮತ್ತು ನೀರನ್ನು ಸಮಗ್ರ ರೀತಿಯಲ್ಲಿ ನಿರ್ವಹಿಸಿ, ಅಂತರ್ಜಲ ಮಟ್ಟವನ್ನು ಹೆಚ್ಚಳ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.
ರಾಜ್ಯದ 14 ಜಿಲ್ಲೆಗಳ, 41 ತಾಲ್ಲೂಕುಗಳು ಅಂತರ್ಜಲ ಕುಸಿತದಿಂದ ಬರಪೀಡಿತ ಪ್ರದೇಶಗಳಾಗಿವೆ. ಈ ಪ್ರದೇಶಗಳ ಅಂತರ್ಜಲ ಮಟ್ಟವನ್ನು ಸುಸ್ಥಿರಗೊಳಿಸಲು ಅಟಲ್ ಭೂಜಲ ಯೋಜನೆಯಡಿ 1,200 ಕೋಟಿ ರೂ.ಗಳ ಅನುದಾನದಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಈಗಾಗಲೇ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೆ.ಸಿ.ಪುರ ಗ್ರಾಮ ಪಂಚಾಯಿತಿಯಲ್ಲಿ ಪ್ರಾಯೋಗಿಕವಾಗಿ ಪ್ರಾರಂಭ ಮಾಡಿದ್ದೇವೆ. ಅಲ್ಲದೆ, ಈ ಯೋಜನೆಯನ್ನು ರಾಷ್ಟ್ರಮಟ್ಟದ ಅಧಿಕಾರಿಗಳು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿ, ರಾಷ್ಟ್ರದ ಎಲ್ಲಾ ಕಡೆ ಪುನರಾವರ್ತನೆ ಮಾಡಲು ಯೋಚನೆ ಮಾಡಿದ್ದಾರೆ ಎಂದು ತಿಳಿಸಿದರು.
ಈ ಯೋಜನೆಯಡಿ ಅಂತರ್ಜಲ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಭೂ ಪ್ರದೇಶದಿಂದ ವ್ಯರ್ಥವಾಗಿ ಸಮುದ್ರಕ್ಕೆ ಹೆಚ್ಚುವರಿಯಾಗಿ ಹರಿದು ಹೋಗುವ ನೀರನ್ನು
ಸಂಗ್ರಹಿಸುವುದು, ಕೆರೆಗಳಿಗೆ ನೀರು ತುಂಬಿಸುವುದು, ಕೃಷಿ ಭೂಮಿಯಲ್ಲಿ ತಡೆ ಬದುಗಳನ್ನು ನಿರ್ಮಿಸಿ ನೀರನ್ನ ಇಂಗಿಸುವುದು, ಇದರ ಜೊತೆಗೆ ಭೂಮಿಯಿಂದ ನೀರು ಆವಿಯಾಗುವುದನ್ನು ತಡೆಯಲು ಮರಗಳನ್ನು ಹೆಚ್ಚಿಗೆ ಬೆಳೆಸಿ ಅರಣ್ಯೀಕರಣ ಮಾಡುವುದು, ನೀರನ್ನು ವೈಜ್ಞಾನಿಕವಾಗಿ ಬಳಕೆ ಮಾಡುವುದು, ಅನಧಿಕೃತವಾಗಿ ನೀರನ್ನು ವ್ಯರ್ಥ ಮಾಡದಂತೆ ಮೈಕ್ರೋ ಇರಿಗೇಷನ್‍ಗೆ ಬಹಳ ಒತ್ತು ಕೊಟ್ಟು ಸಣ್ಣ ನೀರಾವರಿ ಇಲಾಖೆ, ಕೃಷಿ ಇಲಾಖೆ, ಪಂಚಾಯತ್ ರಾಜ್, ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆಗಳ ಮುಖೇನ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಸುಮಾರು ಆರು ತಿಂಗಳಿಂದ ಶ್ರಮಪಟ್ಟು ಕಾರ್ಯಕ್ರಮ ರೂಪಿಸಿದ್ದು, ರಾಜ್ಯಾದ್ಯಂತ ವಿಸ್ತಾರ ಮಾಡಲಾಗುವುದು ಎಂದರು.
ಅಂತರ್ಜಲ ಶೋಷಿತ 41 ತಾಲ್ಲೂಕುಗಳಲ್ಲಿ ಅಟಲ್ ಭೂಜಲ ಯೋಜನೆಯನ್ನು ಸಮಗ್ರವಾಗಿ ಅನುಷ್ಠಾನಗೊಳಿಸಲು ಯೋಜಿಸಿದ್ದು, ಅಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಜಲಾಭಿವೃದ್ಧಿಗೆ ಒತ್ತು ನೀಡುತ್ತೇವೆ. ಈ ಹಿನ್ನೆಲೆಯಲ್ಲಿ ಅಧ್ಯಯನ ಕೊಳವೆ ಬಾವಿಗಳನ್ನು ನಿರ್ಮಿಸಲಾಗುತ್ತಿದ್ದು, ಅಂತರ್ಜಲ ಮಟ್ಟವನ್ನು ವಾರಕ್ಕೊಮ್ಮೆ, 15 ದಿನಕ್ಕೊಮ್ಮೆ, ತಿಂಗಳಿಗೊಮ್ಮೆ ಪರೀಕ್ಷಿಸಿ, ಆ ಭಾಗದ ನೆಲ ಜಲದ ಪರಿಸ್ಥಿತಿ, ನೀರಿನ ಮಟ್ಟ ಇವೆಲ್ಲವುದರ ಮಾಹಿತಿಯನ್ನು ನೀಡಲಾಗುವುದು. ಜೊತೆಗೆ ಬೆಳೆ ಪದ್ದತಿಯನ್ನ ಅಳವಡಿಸಿ, ವ್ಯರ್ಥವಾಗುವ ನೀರನ್ನು ತಡೆದು ಕಡಿಮೆ ನೀರಿನಿಂದ ರೈತರು ಲಾಭದಾಯಕ ಬೆಳೆಗಳನ್ನು ಬೆಳೆಯುವುದರ ಮಾಹಿತಿಯನ್ನ ಈ ಯೋಜನೆಯಲ್ಲಿ ಸ್ಥಾಪಿಸಲಾಗಿದೆ. ಜೊತೆಗೆ ವಿಶ್ವ ಬ್ಯಾಂಕ್ ಕೂಡಾ ಈ ಯೋಜನೆಯ ರೂಪುರೇಷೆಗಳು, ಅಂಶಗಳನ್ನು ತಿಳಿದು ಪ್ರಶಂಸನಾ ಪತ್ರ ಬರೆದಿದೆ. ಆದ್ದರಿಂದ ಈ ಯೋಜನೆಯು ವಿಶ್ವಾದ್ಯಂತ ಶ್ಲಾಘನೀಯ ಕಾರ್ಯಕ್ರಮವಾಗುವುದರಲ್ಲಿ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ಭೂಮಿಯ ಅಂತರ್ಜಲವನ್ನು ಹೆಚ್ಚಿಸಿ, ನೀರನ್ನು ಪುನಶ್ಚೇತನಗೊಳಿಸಿ ಯಶಸ್ಸು ಸಾಧಿಸಬೇಕಾಗಿದೆ ಎಂದರು.