ತುಮಕೂರು: ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಇರುವ ಪೊಕ್ಸೋ ಕಾಯಿದೆಯಡಿ ತುಮಕೂರು ಜಿಲ್ಲೆಯಲ್ಲಿ ಸಾಕಷ್ಟು ಪ್ರಕರಣಗಳು ದಾಖಲಾಗುತ್ತಿವೆ. ಕಟ್ಟುನಿಟ್ಟಿನ ಕಾಯ್ದೆ ಜಾರಿಯಲ್ಲಿದ್ದರೂ ಕೂಡಾ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು ಕಾಯ್ದೆಯನ್ನು ಇನ್ನಷ್ಟು ಕಠಿಣಗೊಳಿಸಬೇಕು ಎಂದು ಮಹಿಳಾಪರ ಹೋರಾಟಗಾರರು ಆಗ್ರಹಿಸುತ್ತಿದ್ದಾರೆ.
ಜಿಲ್ಲೆಯಲ್ಲಿ 2017ರಲ್ಲಿ 73 ಪ್ರಕರಣಗಳು ದಾಖಲಾಗಿದ್ದವು. 2018 ರಲ್ಲಿ 57 ಪ್ರಕರಣಗಳು ಮತ್ತು 2019 ರ ನವೆಂಬರ್ ತಿಂಗಳಿಗೆ 59 ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ವರ್ಷದಿಂದ ವರ್ಷಕ್ಕೆ ದಾಖಲಾಗುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಪೋಕ್ಸೋ ಕಾಯಿದೆಯಲ್ಲಿ ಕಠಿಣ ನಿಯಮಾವಳಿಗಳು ಇರುವುದರಿಂದ ಕೃತ್ಯಗಳಲ್ಲಿ ಭಾಗಿಯಾಗುವ ಆರೋಪಿಗಳು ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿರುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ.ವಂಸಿಕೃಷ್ಣ ಹೇಳಿದ್ರು.
ಕಳೆದ ಮೂರು ವರ್ಷಗಳಿಂದ ಪೋಕ್ಸೋ ಕಾಯಿದೆಯಡಿ ದಾಖಲಾದ 15 ಪ್ರಕರಣಗಳಲ್ಲಿ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ತುಮಕೂರು ಗ್ರಾಮಾಂತರ ಭಾಗದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಶಿರಾ ತಾಲೂಕಿನಲ್ಲಿಯೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ.
ತುಮಕೂರು ನಗರಕ್ಕೆ ಹೊಂದಿಕೊಂಡಂತೆ ಇರುವ ತುಮಕೂರು ಗ್ರಾಮಾಂತರ ಪ್ರದೇಶದಲ್ಲಿಯೇ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಅತಿ ಹೆಚ್ಚು ಬೆಳಕಿಗೆ ಬಂದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು ಎಂದು ತುಮಕೂರು ಪಾಲಿಕೆ ಸದಸ್ಯೆ ಕೆ.ಎಸ್.ಮುಂಜುಳಾ ಆಗ್ರಹಿಸಿದ್ದಾರೆ.