ತುಮಕೂರು: ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ವ್ಯಕ್ತಿಯೋರ್ವ ತನ್ನ ಹೆಂಡತಿ ಮಕ್ಕಳಿಗೆ ಬೆಂಕಿ ಹಚ್ಚಿ ಕ್ರೌರ್ಯ ಮೆರೆದಿದ್ದಾನೆ. ಅನೈತಿಕ ಸಂಬಂಧ ಶಂಕೆ ವ್ಯಕ್ತಪಡಿಸಿ ಪತಿಯು ತನ್ನ ಹೆಂಡತಿ, ಮಕ್ಕಳಿಗೆ ಬೆಂಕಿ ಹಚ್ಚಿದ ಅಮಾನವೀಯ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮುದ್ದನೇರಳೆಕೆರೆ ಗ್ರಾಮದಲ್ಲಿ ನಡೆದಿದೆ. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಆರೋಪಿ ಅವರು ಜೀವ ಉಳಿಸಿಕೊಳ್ಳಬಾರದೆಂದು ರೂಂಗೆ ಬೀಗ ಹಾಕಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿ ಸಾವು, ಮಕ್ಕಳ ಸ್ಥಿತಿ ಗಂಭೀರ.. ರಾಮಾಂಜಿ ಎಂಬುವನಿಂದ ಕೃತ್ಯ ನಡೆದಿದೆ. ಘಟನೆಯಲ್ಲಿ ಪತ್ನಿ ಶಾಂತಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 17 ವರ್ಷ, 13 ವರ್ಷ ಹಾಗೂ ಅಮೃತಾ 10 ವರ್ಷ ವಯಸ್ಸಿನ ಮೂವರು ಹೆಣ್ಣು ಮಕ್ಕಳಿಗೆ ಗಂಭೀರ ಗಾಯವಾಗಿದೆ. ಮೂವರಿಗೂ ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಬೆಂಕಿ ಹಚ್ಚಿ ಪರಾರಿಯಾಗಿದ್ದ ಆರೋಪಿ ರಾಮಾಂಜಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ನಿಗೆ ಬೆಂಕಿ ಹಚ್ಚಿದ ಪಾಪಿ ಪತಿ: ಮಕ್ಕಳೆದುರಿಗೆ ಗಂಡ ತನ್ನ ಹೆಂಡತಿಗೆ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ ಇತ್ತೀಚೆಗೆ ತೆಲಂಗಾಣದಲ್ಲಿ ಬೆಳಕಿಗೆ ಬಂದಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪತ್ನಿ 20 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದರು. ನವ್ಯಶ್ರೀ ಘಟನೆಯಲ್ಲಿ ಸಾವನ್ನಪ್ಪಿರುವ ಮಹಿಳೆ. ತಿರುನಗರಿ ನರೇಂದ್ರ ಕೃತ್ಯ ಎಸಗಿದ ಆರೋಪಿ.
ಇದನ್ನೂ ಓದಿ: ಮಕ್ಕಳೆದುರಲ್ಲೇ ಹೆಂಡತಿಗೆ ಬೆಂಕಿ ಹಚ್ಚಿದ ಪಾಪಿ ಪತಿ.. ನರಳಿ ನರಳಿ ಪ್ರಾಣ ಬಿಟ್ಟ ಪತ್ನಿ
ಪ್ರಾಂಶುಪಾಲೆಗೆ ಬೆಂಕಿ ಹಚ್ಚಿದ್ದ ವಿದ್ಯಾರ್ಥಿ: ಕೆಲ ದಿನಗಳ ಹಿಂದೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದ ಪ್ರಕರಣವೊಂದರಲ್ಲಿ ಕಾಲೇಜಿನ ಪ್ರಾಂಶುಪಾಲೆ ಮೇಲೆ ಹಳೆ ವಿದ್ಯಾರ್ಥಿಯೋರ್ವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಿಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲೆ ವಿಮುಕ್ತ ಶರ್ಮಾ (54) ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. 24 ವರ್ಷದ ಅಶುತೋಷ್ ಶ್ರೀವಾಸ್ತವ್ ಈ ಕೃತ್ಯ ಎಸಗಿದ್ದ. ಆರೋಪಿಯು ತನ್ನ ಬಿ. ಫಾರ್ಮಾ ಅಂತಿಮ ವರ್ಷದ ಏಳನೇ ಸೆಮಿಸ್ಟರ್ನಲ್ಲಿ ಐದು ವಿಷಯಗಳಲ್ಲಿ ಅನುತ್ತೀರ್ಣ ಆಗಿದ್ದ ನಂತರ ಎಂಟನೇ ಸೆಮಿಸ್ಟರ್ ಪರೀಕ್ಷೆ ಬರೆದು ಎಲ್ಲ ವಿಷಯಗಳಲ್ಲಿ ಉತ್ತೀರ್ಣನಾಗಿದ್ದ. ಆದರೆ, ಏಳನೇ ಸೆಮಿಸ್ಟರ್ನಲ್ಲಿ ವಿಷಯಗಳು ಬಾಕಿ ಉಳಿದಿರುವುದರಿಂದ ಅಶುತೋಷ್ಗೆ ಅಂಕಪಟ್ಟಿ ನೀಡಿರಲಿಲ್ಲ. ಇದರಿಂದ ಕೋಪಗೊಂಡ ಅಶುತೋಷ್ ಪ್ರಾಂಶುಪಾಲೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಎಂಬ ವಿಚಾರ ಪೊಲೀಸರ ತನಿಖೆಯಲ್ಲಿ ಬಯಲಾಗಿತ್ತು.
ಇದನ್ನೂ ಓದಿ: ಪ್ರಾಂಶುಪಾಲೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಮಾಜಿ ವಿದ್ಯಾರ್ಥಿ: ಚಿಕಿತ್ಸೆ ಫಲಿಸದೆ ಸಾವು