ತುಮಕೂರು : ಪ್ರೀತಿಸಿ ಮದುವೆಯಾಗಿದ್ದರೂ ಕ್ಷುಲ್ಲಕ ಕಾರಣಕ್ಕೆ ತನ್ನ ಪತ್ನಿಯನ್ನೇ ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪತಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ತಾಲೂಕಿನ ಮುಸಕೊಂಡ್ಲು ಗ್ರಾಮದ ಗೋವಿಂದರಾಜ ಎಂಬಾತನಿಗೆ 6ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಿ ವಿ ಚಂದ್ರಶೇಖರ್ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಅಪರಾಧಿ ಗೋವಿಂದರಾಜು ಎಂಬಾತ ದೊಡ್ಡಗುಣಿ ಗ್ರಾಮದ ತುಳಸಮ್ಮ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಆ ನಂತರ ತುಳಸಮ್ಮ ನಡವಳಿಕೆ ಸರಿಯಿಲ್ಲ ಎಂದು ಪ್ರತಿನಿತ್ಯ ಚಿತ್ರಹಿಂಸೆ ನೀಡುತ್ತಿದ್ದ.
ಆರೋಪಿಯು 2018ರಲ್ಲಿ ಜಮೀನು ಕೆಲಸಕ್ಕೆ ಹೋದಾಗ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಏಕಾಏಕಿ ಕುಡುಗೋಲಿನಿಂದ ಆಕೆಯ ಮೇಲೆ ಹಲ್ಲೆ ಮಾಡಿದ್ದ. ಇದರಿಂದ ತೀವ್ರ ರಕ್ತಸ್ರಾವದಿಂದ ತುಳಸಮ್ಮ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಸುನೀಗಿದ್ದರು.
ಈ ಕುರಿತಂತೆ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಆರನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ : ವಿವಾಹಕ್ಕೆ ಪೋಷಕರ ನಿರಾಕರಣೆ: ಮನನೊಂದ ಪ್ರೇಮಿಗಳು ಆತ್ಮಹತ್ಯೆ: ವಿಡಿಯೋ