ತುಮಕೂರು: ಭಾರತೀಯರಾದ ನಾವು ಮಹಾತ್ಮ ಗಾಂಧೀಜಿಯವರ ವಿಚಾರಗಳನ್ನು, ತತ್ತ್ವ-ಆದರ್ಶಗಳನ್ನು, ಸಿದ್ಧಾಂತಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ನೆಹರೂ ಯುವ ಕೇಂದ್ರ, ಬಾಪೂಜಿ ವಿದ್ಯಾಸಂಸ್ಥೆ ಹಾಗೂ ಮಹಾತ್ಮ ಗಾಂಧಿ ಯುವ ಸಂಘದವರ ಸಂಯುಕ್ತಾಶ್ರಯದಲ್ಲಿ ಹೊರಪೇಟೆಯಲ್ಲಿರುವ ಬಾಪೂಜಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮಹಾತ್ಮ ಗಾಂಧೀಜಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಕೃಷ್ಣಮೂರ್ತಿ, ಮಹಾತ್ಮ ಗಾಂಧೀಜಿಯವರು ಒಬ್ಬ ಹಂತಕನ ಗುಂಡಿಗೆ ಬಲಿಯಾಗಿದ್ದು ವಿಷಾದನೀಯ ಸಂಗತಿ ಎಂದರು.
ಇಡೀ ಜಗತ್ತು ಮಹಾತ್ಮಗಾಂಧೀಜಿಯವರ ತತ್ತ್ವವನ್ನು ಅಳವಡಿಸಿಕೊಳ್ಳುವ ಮೂಲಕ ಗಾಂಧೀಜಿಯವರ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿಕೊಂಡಿವೆ. ಅದರಂತೆ ಈ ದೇಶದ ಮಕ್ಕಳಾದ ನಾವೂ ಗಾಂಧೀಜಿಯವರ ತತ್ತ್ವವನ್ನು ಹೆಚ್ಚು ಹೆಚ್ಚು ಅಳವಡಿಸಿಕೊಳ್ಳಬೇಕು ಹಾಗೂ ಪ್ರತಿವರ್ಷವೂ ಸ್ವಾತಂತ್ರ್ಯಕ್ಕೋಸ್ಕರ ತಮ್ಮ ಜೀವವನ್ನು ಮುಡಿಪಾಗಿಟ್ಟವರನ್ನು ನೆನೆಯುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕು ಎಂದು ಮಕ್ಕಳಿಗೆ ಗಾಂಧೀಜಿ ಅವರ ಕುರಿತು ತಿಳಿವಳಿಕೆಯನ್ನ ಮೂಡಿಸಿದರು.