ತುಮಕೂರು: ಸಚಿವ ಮಾಧುಸ್ವಾಮಿಯವರು ಪ್ರತೀ ಬಾರಿಯೂ ಜನ ಪರವಾಗಿಯೇ ನಿಲುವನ್ನು ತೆಗೆದುಕೊಂಡಿದ್ದಾರೆ. ನಾನು ಪರೀಕ್ಷೆ ಮಾಡಿರೋ ಎಲ್ಲಾದರಲ್ಲೂ ಮಾಧುಸ್ವಾಮಿ ಜಯಶೀಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಚಿಕ್ಕನಾಯಕನಹಳ್ಳಿಯಿಂದ ದೊಡ್ಡ ನಾಯಕನನ್ನು ಆರಿಸಿ ತಂದ ಎಲ್ಲರಿಗೂ ಅಭಿನಂದನೆ. ನನ್ನ ಮಾಧುಸ್ವಾಮಿ ಸಂಬಂಧ ನನ್ನ ತಂದೆ ಕಾಲದಿಂದ ಇದೆ. ಅವರ ಕೆಲಸವನ್ನು 35 ವರ್ಷಗಳಿಂದ ನೋಡಿಕೊಂಡು ಬಂದಿದ್ದೀವಿ. ಅವರ ಬಗ್ಗೆ ನಮಗೆ ಅಪಾರವಾದ ಪ್ರೀತಿ, ಗೌರವ. ನಾನು ಸಾಮಾನ್ಯವಾಗಿ ಎಲ್ಲರನ್ನೂ ಒಪ್ಪಿಕೊಳ್ಳಲ್ಲ. ಆದರೆ ಇವರನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದೇನೆ ಎಂದು ಹೇಳಿದರು.
ರಾಜಕಾರಣದಲ್ಲಿ ಎರಡು ತರಹದ ರಾಜಕಾರಣ ಇರುತ್ತದೆ. ಅಧಿಕಾರ ಹಿಡಿಯೋದಕ್ಕೆ ರಾಜಕಾರಣ. ಅಧಿಕಾರ ಸಿಕ್ಕ ಮೇಲೆ ಅದನ್ನು ಬಳಕೆ ಮಾಡಿಕೊಳ್ಳುವ ರಾಜಕಾರಣ. ಅಧಿಕಾರದ ಮುಖಾಂತರ ಜನರಿಗೆ ನ್ಯಾಯ ಕೊಡಬೇಕು ಎಂಬುದು ಮತ್ತೊಂದು ರಾಜಕಾರಣ. ಮಾಧುಸ್ವಾಮಿ ಜನರ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಅವರು ಅಧಿಕಾರದಲ್ಲಿ ಇರಲಿ, ಇಲ್ಲದೇ ಇರಲಿ ಯಾವಾಗಲೂ ಜನರಪ ಯೋಜನೆ ರೂಪಿಸಿದ್ದಾರೆ ಎಂದರು.
ನಮ್ಮ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ಯಾವುದೇ ಸರ್ಕಾರ ತೆಗೆದುಕೊಳ್ಳಲು ಸಾಧ್ಯ ಇರಲಿಲ್ಲ. ಕೋವಿಡ್ ಸಮಯದಲ್ಲಿ ಬಿಎಸ್ವೈ, ಮೋದಿಜಿ ಆಡಳಿತ ವೈಖರಿ ಮೆಚ್ಚುವಂತದ್ದು. ಮೋದಿ ಅವರ ಕನಸಿನ ಜಲಜೀವನ್ ಮಿಷನ್ ಯೋಜನೆಯಡಿ ಪ್ರತೀ ಗ್ರಾಮದ ಮನೆ ಮನೆಗೆ ನೀರು ಕೊಟ್ಟಿದ್ದೀವಿ. ಚಿಕ್ಕನಾಯಕನಹಳ್ಳಿಯಲ್ಲಿ 50 ಸಾವಿರ ಕುಟುಂಬಗಳಿಗೆ ಕುಡಿಯಲು ನೀರು ಕೊಟ್ಟಿದ್ದೇವೆ ಸ್ವಾತಂತ್ರ್ಯದ ಬಳಿಕ ಇದೊಂದು ಕ್ರಾಂತಿಕಾರಿ ದಾಖಲೆ. ಈ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಕೆಲವರು ಮೊಸರಲ್ಲಿ ಕಲ್ಲು ಹುಡುಕುತ್ತಾರೆ ಎಂದು ಸಿಎಂ ಹೇಳಿದರು.
ಕಾನೂನು ಸಚಿವರಾಗಿ ಮಾಧುಸ್ವಾಮಿ ನಮ್ಮ ಸರ್ಕಾರಕ್ಕೆ ದೊಡ್ಡ ಆಸ್ತಿ: ಹೇಮಾವತಿ ನದಿ ನೀರು ತುಮಕೂರಿಗೆ ಹರಿಯೋದಕ್ಕೆ ಸಾಧ್ಯತೆಯೇ ಇರಲಿಲ್ಲ, ಆ ಸಂದರ್ಭದಲ್ಲಿ ಮಾಧುಸ್ವಾಮಿ ಹೋರಾಟ ಮಾಡಿದರು, ಅವರ ಹೋರಾಟದ ಫಲವಾಗಿ ಅಂದಿನ ಸಿಎಂ ರಾಮಕೃಷ್ಣ ಹೆಗಡೆ ದೊಡ್ಡ ಮನಸ್ಸು ಮಾಡಿ ಈ ಕಾರ್ಯ ಕೈಗೊಂಡರು. ತುಮಕೂರಿನ ಮಣ್ಣು ಬಹಳ ಶ್ರೇಷ್ಠ, ಇದಕ್ಕೆ ಹೇಮಾವತಿ ನೀರನ್ನು ಸೇರಿಸಿದರೆ, ಭೂಮಿ ತಾಯಿ ಬಂಗಾರದ ಬೆಳೆ ಕೊಡ್ತಾಳೆ ಎಂದು ಹೇಳಿದರು.
ತುಮಕೂರು ಕ್ಷೇತ್ರ ಕೃಷಿ, ಕೈಗಾರಿಕೆಯಲ್ಲಿ ಅಭಿವೃದ್ಧಿ ಆದರೆ ಕರ್ನಾಟಕದ GDP ಹೆಚ್ಚಾಗುತ್ತದೆ. ತುಮಕೂರು ಅಭಿವೃದ್ಧಿ ಆಗುವುದು ನಮ್ಮ ರಾಜ್ಯದ ಅಭಿವೃದ್ಧಿಗೆ ಅನುಕೂಲ. ಬೆಂಗಳೂರು ನಂತರ ಅತ್ಯಂತ ಪ್ರಮುಖ ಜಿಲ್ಲೆ ತುಮಕೂರು. ಸಣ್ಣ ನೀರಾವರಿ ಖಾತೆ ಅವರಿಗೆ ಸಿಕ್ಕ ಮೇಲೆ ದೊಡ್ಡ ನೀರಾವರಿ ಕೆಲಸವನ್ನು ಮಾಧುಸ್ವಾಮಿ ಮಾಡಿದ್ದಾರೆ. ನಮಗೆ ಜನಪ್ರಿಯತೆಗಿಂತ ಜನ ಉಪಯೋಗಿ ಶಾಸಕರು ಬೇಕು. ಅದನ್ನು ಮಾಧುಸ್ವಾಮಿ ಅವರು ಮಾಡ್ತಿದ್ದಾರೆ. ಉತ್ತಮ ಆಡಳಿತಗಾರನಿಗೆ ಜನ ಉಪಯೋಗಿ ಶಾಸಕ ಸಿಕ್ಕರೆ ಅಭಿವೃದ್ಧಿ ಆಗುತ್ತದೆ. ಮಾಧುಸ್ವಾಮಿಯನ್ನು ನಾನು ಹೊಗಳುವ ಅವಶ್ಯಕತೆ ಇಲ್ಲ. ಇಡೀ ಕರ್ನಾಟಕದ ಎಲ್ಲಾ ವಿಷಯಗಳನ್ನು ಮಾಧುಸ್ವಾಮಿ ತಿಳಿದುಕೊಂಡಿದ್ದಾರೆ ಎಂದು ಸಿಎಂ ಹೊಗಳಿದರು.
ಕೊರಟಗೆರೆಯಲ್ಲಿ ಮುಖ್ಯಮಂತ್ರಿಗೆ ಅದ್ಧೂರಿ ಸ್ವಾಗತ: ಕೊರಟಗೆರೆ ವಿಜಯ ಸಂಕಲ್ಪ ಯಾತ್ರೆ ಹಿನ್ನೆಲೆ ಕೊರಟಗೆರೆಗೆ ಆಗಮಿಸಿದ ಸಿಎಂ ಬೊಮ್ಮಾಯಿ ಅವರಿಗೆ ಪಟಾಕಿ ಸಿಡಿಸಿ, ಹೂ ಮಳೆ ಸುರಿಸಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಸಿಎಂ ಬೊಮ್ಮಾಯಿ ಜೊತೆ ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಕೆ. ಮಂಜುನಾಥ್, ಮಾಜಿ ಶಾಸಕ ಗಂಗಹನುಮಯ್ಯ, ಕೊರಟಗೆರೆ ಆಕಾಂಕ್ಷಿ ಅನಿಲ್ ಕುಮಾರ್ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಾಥ್ ನೀಡಿದರು.
ನಂತರ ನಡೆದ ರೋಡ್ ಶೋ ಗೂ ಮೊದಲು ಕನಕದಾಸ ಪ್ರತಿಮೆಗೆ ಹೂವಿನ ಹಾರ ಹಾಕಿ ತೆರದ ವಾಹನದಲ್ಲಿ ರೋಡ್ ಶೋ ನಡೆಸಿದರು. ಮೆರವಣಿಗೆಯಲ್ಲಿ ಸಿಎಂ ಬಸವರಾಜು ಬೊಮ್ಮಾಯಿ, ಸಚಿವ ಆರ್ ಅಶೋಕ್, ಬಿಸಿ ನಾಗೇಶ್, ಕೊರಟಗೆರೆ ಬಿಜೆಪಿ ಅಕಾಂಕ್ಷಿ ಅಭ್ಯರ್ಥಿ ಅನಿಲ್ ಕುಮಾರ್, ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಕೊರಟಗೆರೆ ಪಟ್ಟಣದುದ್ದಕ್ಕೂ ಬಿಜೆಪಿ ಧ್ವಜ, ಫ್ಲೆಕ್ಸ್ ಹಿಡಿದು ಹೆಜ್ಜೆ ಹಾಕಿದರು.
ಇದನ್ನೂ ಓದಿ: ಕಾಂಗ್ರೆಸ್ನದ್ದು ಗ್ಯಾರಂಟಿ ಕಾರ್ಡ್ ಅಲ್ಲ, ವಿಸಿಟಿಂಗ್ ಕಾರ್ಡ್.. ಸಿಎಂ ಬೊಮ್ಮಾಯಿ ವ್ಯಂಗ್ಯ