ತುಮಕೂರು: ಶಿರಾ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಬಿಜೆಪಿಯ ಮದಲೂರು ಕೆರೆಗೆ ನೀರು ತುಂಬಿಸುವ ಭರವಸೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ಆರೋಪ ಮತ್ತು ಪ್ರತ್ಯಾರೋಪಕ್ಕೆ ವೇದಿಕೆಯಾಗಿದೆ.
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳಿ ಇತಿಹಾಸ ಬರೆದಿದೆ. ಉಪಚುನಾವಣೆಯಲ್ಲಿ ಸಿಎಂ ಆದಿಯಾಗಿ ಪ್ರಚಾರಕ್ಕೆ ಬಂದ ಪ್ರತಿಯೊಬ್ಬ ಸಚಿವರು ಕೂಡ ಮದಲೂರು ಕೆರೆ ವಿಷಯವನ್ನೇ ಪ್ರಮುಖವಾಗಿಸಿಕೊಂಡಿದ್ರು. ಬಹುನಿರೀಕ್ಷಿತ ಮದಲೂರು ಕೆರೆಗೆ ಹರಿಯುತ್ತಿದ್ದ ನೀರು ಸ್ಥಗಿತಗೊಂಡಿದ್ದು, ಕೆರೆಯಲ್ಲಿ ನಿರೀಕ್ಷೆಯಂತೆ ನೀರು ಸಂಗ್ರಹವಾಗಿಲ್ಲ. ಬದಲಿಗೆ ಕೆರೆ ಬತ್ತುವ ಹಂತಕ್ಕೆ ತಲುಪಿದೆ.
ಚುನಾವಣೆ ನಂತರ ನೀರು ಹರಿಸ್ತೇವೆ ಎಂದು ಖುದ್ದು ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದರು. ನಂತರ ಇಲ್ಲಿನ ಜನರು ಪಕ್ಷಬೇಧ ಮರೆತು ಮತಹಾಕಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡರನ್ನ ಗೆಲ್ಲಿಸಿದ್ದರು. ಆದರೆ ಇದೀಗ ನೀರು ಹರಿಯುವುದು ನಿಂತಿದ್ದು, ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಬಗ್ಗೆ ಮಾತನಾಡಿದ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಕೆರೆಗೆ ನೀರೇ ಹರಿಸಿಲ್ಲ, ಆಗಲೇ ಮೀನು ಬಿಡುವ ಬಗ್ಗೆ ಸಚಿವರೊಬ್ಬರು ಮಾತನಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನೊಂದೆಡೆ ಮದಲೂರು ಕೆರೆಯಲ್ಲಿ ನೀರು ಸಂಗ್ರಹವಾಗದಿರಲು ಈ ಹಿಂದೆ ಬೇಕಾಬಿಟ್ಟಿಯಾಗಿ ನಡೆದಿರೋ ಮರಳು ಗಣಿಗಾರಿಕೆಯೇ ಕಾರಣವಾಗಿದೆ. ಹೀಗಾಗಿ ಕೆರೆ ತುಂಬಲು ಇದ್ದ ಅಗತ್ಯಕ್ಕಿಂತ ಹೆಚ್ಚುವರಿ ನೀರು ಹರಿಸಿದ್ರೂ ಎಲ್ಲಾ ನೀರು ಸಂಗ್ರಹವಾಗಿಲ್ಲ. ಮರಳುಗಾರಿಕೆಯಿಂದ ದೊಡ್ಡ ದೊಡ್ಡ ಗುಂಡಿಗಳು ಇದ್ದದ್ದರಿಂದ ನೀರು ಇಂಗುತ್ತಿದೆ ಎಂಬುದು ಬಿಜೆಪಿ ಶಾಸಕ ಡಾ. ರಾಜೇಶ ಗೌಡ ಸಮರ್ಥನೆಯಾಗಿದೆ.