ತುಮಕೂರು: ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿದ್ದು, ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣವಾಗಿದೆ. ಅಲ್ಲದೇ ಪಕ್ಷದ ಸೋಲಿಗೆ ನೀವು (ಬಸವರಾಜ ಪಾಟೀಲ ಯತ್ನಾಳ್) ನಿರಂತರ ಪಕ್ಷದ ನಾಯಕರ ವಿರುದ್ಧ ಮಾತನಾಡಿದ್ದೂ ಕಾರಣ ಎಂದು ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ, ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಬಗ್ಗೆ ಮಾತನಾಡಲು ನಿಮಗೆ ಯಾವುದೇ ನೈತಿಕತೆ ಇಲ್ಲ. ಯಡಿಯೂರಪ್ಪ ರಾಜೀನಾಮೆ ಕೊಟ್ಟ ಮೇಲೂ, ವಿಜಯೇಂದ್ರ ಮತ್ತು ಯಡಿಯೂರಪ್ಪ ವಿರುದ್ಧ ಹಾದಿ - ಬೀದಿಯಲ್ಲಿ ಮಾತನಾಡಿದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯತ್ನಾಳ್ ಹಿರಿಯರಿದ್ದಾರೆ. ಯತ್ನಾಳ್ ಮೇಲೆ ಗೌರವ ಇದೆ. ಆದರೆ ನೀವು ಆಡಿಯೋ ಮಾಡಿ ಲೀಕ್ ಮಾಡಿದ್ದೀರಲ್ಲ ಎಂದು ಕಿಡಿಕಾರಿದರು. ಯಡಿಯೂರಪ್ಪ ಅವರನ್ನು ಇಳಿಸಿದ ಮೇಲೆ ವೀರಶೈವ ಲಿಂಗಾಯತರು ಅಷ್ಟೇ ಅಲ್ಲ. ಎಲ್ಲ ವರ್ಗದ ಜನರು ವಿರುದ್ಧ ಆದರು. ಹಾಗಾಗಿ ಸೋಲಬೇಕಾಯಿತು ಎಂದು ಆರೋಪಿಸಿದರು.
ಶಿಕಾರಿಪುರದಲ್ಲಿ ವಿಜಯೇಂದ್ರ ಅವರನ್ನು ಸೋಲಿಸಲು ಕೆಲವರು ಷಡ್ಯಂತ್ರ ನಡೆಸಿದ್ದರು, ಸ್ವಪಕ್ಷದವರೇ ಷಡ್ಯಂತ್ರ ಮಾಡಿದರು, ಆದರೆ ಶಿಕಾರಿಪುರದ ಜನರ ಆಶೀರ್ವಾದದಿಂದ ವಿಜಯೇಂದ್ರ ಗೆದ್ದು ಬಂದರು. ಷಡ್ಯಂತ್ರ ನಡೆಸಿದವರ ಹೆಸರನ್ನು ಮುಂದಿನ ದಿನಗಳಲ್ಲಿ ಹೇಳ್ತೀನಿ. ವಿಜಯೇಂದ್ರ ಗೆದ್ದರೆ ದೊಡ್ಡ ನಾಯಕನಾಗಿ ಹೊರಹೊಮ್ಮುತ್ತಾರೆ ಎಂದು ವಿಜಯೇಂದ್ರ ಅವರನ್ನು ಸೋಲಿಸಲು ಷಡ್ಯಂತ್ರ ಮಾಡಿದ್ದರು. ಸೋಮಣ್ಣ ಅವರ ಸೋಲಿಗೆ ಯಡಿಯೂರಪ್ಪ ವಿಜಯೇಂದ್ರ ಕಾರಣರಲ್ಲ ಎಂದು ಅವರು ಇದೇ ವೇಳೆ ತಿಳಿಸಿದರು.
ಬೊಮ್ಮಾಯಿ ಸೋಲಿಸಲು ವಿಜಯೇಂದ್ರ ಪ್ರಯತ್ನ ಮಾಡಿಲ್ಲ: ಬಸವರಾಜ ಬೊಮ್ಮಾಯಿ ಅವರನ್ನು ಸೋಲಿಸಬೇಕು ಎಂದು ವಿಜಯೇಂದ್ರ ಮತ್ತು ಯಡಿಯೂರಪ್ಪ ಎಲ್ಲಿಯೂ ಕೂಡ ಪ್ರಯತ್ನ ಮಾಡಿಲ್ಲ. ಗೋವಿಂದರಾಜ ನಗರ ಕ್ಷೇತ್ರದಲ್ಲಿ ಫಲಿತಾಂಶ ತದ್ವಿರುದ್ಧ ಆಗಲಿದೆ ಎಂದು ತಿಳಿದು, ಸ್ವತಃ ಸೋಮಣ್ಣ ಅವರೇ, ಮೈಸೂರಿಗೆ ಹೋದರು. ಲಿಂಗಾಯತ ನಾಯಕರಾಗಬೇಕು ಮತ್ತು ಸಿಎಂ ಆಗಬೇಕು ಎಂದು ಹಗಲುಗನಸುಗಳ ಕಂಡು ಅಲ್ಲಿಗೆ ಹೋದರು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಹೆಸರನ್ನು ಹೇಳಿದ್ದಕ್ಕೆ ಸೋಮಣ್ಣ ಅವರಿಗೆ ಅಷ್ಟು ಮತಗಳು ಬಂದಿವೆ. ಸೋಮಣ್ಣ ಮತ್ತು ಯತ್ನಾಳ್ ಇಬ್ಬರು ಮೆದುಳು ನಾಲಿಗೆಗೆ ಲಿಂಕ್ ಇಲ್ಲದಂತೆ ಮಾತನಾಡುತ್ತಾರೆ. ಸೋಮಣ್ಣ ದೆಹಲಿಯ ವರಿಷ್ಠರನ್ನು ಭೇಟಿ ಮಾಡಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ವಾಗ್ದಾಳಿ ಮಾಡುವುದು ಸರಿಯಲ್ಲ ಎಂದರು.
ಗೋವಿಂದರಾಜ ನಗರ ಕ್ಷೇತ್ರದಲ್ಲಿ ಸೋಮಣ್ಣ ಸೋಲ್ತಾರೆ ಎನ್ನುವುದು ಮೊದಲೇ ಗೊತ್ತಾಗಿ, ಸೋಮಣ್ಣ ಬೇರೆ ಕಡೆ ಹೋಗಿ ಸ್ಪರ್ಧೆ ಮಾಡಿದ್ರು. ಕಾಂಗ್ರೆಸ್ನಲ್ಲಿ ಅವರಿಗೆ ಯಾವುದೇ ಸ್ಥಾನಮಾನ ಕೊಟ್ಟಿರಲಿಲ್ಲ, ಹೀಗಾಗಿ ಯಡಿಯೂರಪ್ಪರ ಕಾಲು ಹಿಡಿದುಕೊಂಡು ಕಾಡಿಬೇಡಿ ಬಿಜೆಪಿಗೆ ಬಂದ್ರು ಎಂದು ಹೇಳಿದರು.
ಸೋತ ತಕ್ಷಣ ಕಣ್ಣೀರು ಹಾಕ್ತಾ ಇದ್ರು ಸೋಮಣ್ಣ, ಮನೆಗೆ ಹೋಗಿ ಯಡಿಯೂರಪ್ಪ ಸಮಾಧಾನ ಮಾಡಿದ್ರು, ಅವರ ಕಣ್ಣೀರು ಒರೆಸಿ ಸಮಾಧಾನ ಮಾಡಿದ್ದು ಯಡಿಯೂರಪ್ಪ ಎಂದರು. ಸೋಮಣ್ಣ ಅವರು ಕಾಂಗ್ರೆಸ್ ನಿಂದ ಬಂದಿದ್ದಾರೆ. ಯಡಿಯೂರಪ್ಪ ಕಟ್ಟಿ ಬೆಳೆಸಿದ ಬಿಜೆಪಿ ಬಗ್ಗೆ ಮಾತನಾಡಲಿಕ್ಕೆ ನಿಮಗೆ ಯಾವ ನೈತಿಕತೆ ಇದೆ. ಸೋಮಣ್ಣ ನೀವು ಮೂಲ ಕಾಂಗ್ರೆಸ್ಸಿಗರು, ನೀವೇನು ಹೋರಾಟ ಮಾಡಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ್ದೀರಾ ಎಂದು ಪ್ರಶ್ನಿಸಿದರು.
ಸೋಮಣ್ಣ ಸುಳ್ಳಿನಲ್ಲಿ ಭಾರಿ ಮೋಡಿಗಾರ. ಸೋಮಣ್ಣ ಸತ್ಯ ಹರಿಶ್ಚಂದ್ರ ಅನ್ನುವ ಹಾಗೆ ಮಾತಾಡ್ತಾರೆ. ಸುಳ್ಳಿಗೆ ಮತ್ತೊಂದು ಹೆಸರು ಸೋಮಣ್ಣ ಅಂತ ಜನ ಮಾತಾಡ್ತಾರೆ, ನಾನಲ್ಲ. ಚಾಮರಾಜನಗರದಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲುವುದಕ್ಕೆ ಸೋಮಣ್ಣನೇ ಕಾರಣ ಎಂದು ಆರೋಪಿಸಿದರು.
ಬಿಜೆಪಿಯಲ್ಲಿ ಪ್ರಶ್ನಾತೀತ ನಾಯಕ ಎಂದರೆ ಅದು ಯಡಿಯೂರಪ್ಪ. ಯಡಿಯೂರಪ್ಪ ಅವರನ್ನು ಟೀಕಿಸುವ ನೈತಿಕ ಹಕ್ಕು ಸೋಮಣ್ಣ ಅವರಿಗಿಲ್ಲ. ಪದೇ ಪದೆ ವಾಗ್ದಾಳಿ ಮಾಡುವುದು ಸರಿಯಲ್ಲ. ಈಗಲಾದರೂ ಬಿಡ್ರಿ ಎಂದು ಸೋಮಣ್ಣ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ: ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ದರ ಜಾಸ್ತಿ ಮಾಡಲು ಹೊರಟಿದ್ದಾರೆ. ನೀವೇನಾದ್ರು ಪೆಟ್ರೋಲ್, ಡಿಸೇಲ್ ದರ ಜಾಸ್ತಿ ಮಾಡಿದ್ರೆ ದೊಡ್ಡ ಹೋರಾಟ ಮಾಡುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್ ತೊಲಗಬೇಕು, ಅಲ್ಲಿಯ ವರೆಗೆ ದೊಡ್ಡ ಹೋರಾಟ ಮಾಡ್ತೇವಿ. ಇದು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ. ಜನಸಾಮಾನ್ಯರು ನಿತ್ಯ ಬಳಸುವ ವಸ್ತುಗಳ ದರ ಗಗನಕ್ಕೆರಿದೆ. ನಿಮ್ಮ ಸರ್ಕಾರಕ್ಕೆ ಯಾವ ನೈತಿಕ ಹಕ್ಕಿದೆ. ಸರ್ಕಾರ ರಚನೆಯಾಗಿ 6 ತಿಂಗಳಾಗಿದೆ. ಇನ್ನು ಸರ್ಕಾರ ಟೇಕ್ ಅಪ್ ಆಗಿಲ್ಲ ಎಂದು ಟೀಕಿಸಿದರು.
ಇದನ್ನೂಓದಿ:ಬೆಳಗಾವಿ: ಸಚಿವ ಜಮೀರ್ ಅಹಮದ್ ವಿರುದ್ಧ ಬಿಜೆಪಿ ಎಂಎಲ್ಸಿಗಳ ಪ್ರತಿಭಟನೆ