ತುಮಕೂರು: ಹೇಮಾವತಿ ನಾಲೆಯಲ್ಲಿ ಯುವ ಪ್ರೇಮಿಗಳ ಶವ ತೇಲಿ ಬಂದಿರುವ ಘಟನೆ ತಿಪಟೂರು ತಾಲೂಕಿನ ಲಿಂಗದಹಳ್ಳಿ ಗ್ರಾಮದ ಬಳಿ ನಡೆದಿದೆ.
ಮೃತರನ್ನು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಮತಿಘಟ್ಟ ಗ್ರಾಮದ ರಮೇಶ (19), ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ನಿವಾಸಿ ಸುಶ್ಮಿತಾ (19) ಎಂದು ಗುರುತಿಸಲಾಗಿದೆ.
ಇಬ್ಬರೂ ವೇಲ್ನಿಂದ ಪರಸ್ಪರ ಕಟ್ಟಿಕೊಂಡು ಹೇಮಾವತಿ ನಾಲೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಲಿಂಗದಹಳ್ಳಿ ಗ್ರಾಮದ ಬಳಿ ಹೇಮಾವತಿ ನಾಲೆಯಲ್ಲಿ ಇಬ್ಬರ ಶವಗಳು ತೇಲಿ ಹೋಗುತ್ತಿರುವುದನ್ನು ಕಂಡ ಸ್ಥಳೀಯರು ನೊಣವಿನಕೆರೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಶವಗಳನ್ನು ನಾಲೆಯಿಂದ ಹೊರಕ್ಕೆ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಇಬ್ಬರೂ ಅನ್ಯ ಕೋಮಿಗೆ ಸೇರಿದವರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ತಮ್ಮ ಮದುವೆಗೆ ಒಪ್ಪಿಗೆ ಸಿಗುವುದಿಲ್ಲ ಎಂಬುದನ್ನು ಅರಿತ ಯುವ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.
ಈ ಸಂಬಂಧ ಮೃತಪಟ್ಟಿರುವ ರಮೇಶನ ಸಹೋದರ ರವಿಕುಮಾರ ನೊಣವಿನಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.